ನವದೆಹಲಿ: ಸತತ ವೈಫಲ್ಯ ಅನುಭವಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಬಿಸಿಸಿಐ ಕೆಂಡಾಮಂಡಲವಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಸ್ಟಾರ್ ಆಟಗಾರರು ದೇಶೀ ಟೂರ್ನಿಯತ್ತ ಮುಖಮಾಡಿದ್ದಾರೆ.
ದೆಹಲಿ ತನ್ನ ರಣಜಿ ಟ್ರೋಫಿ ತಂಡವನ್ನು ಅಂತಿಮಗೊಳಿಸಿದ್ದು, ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ 13 ವರ್ಷಗಳ ಬಳಿಕ ಕೊಹ್ಲಿ ದೆಹಲಿ ರಣಜಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಲ್ಲದೆ, ರಿಷಬ್ ಪಂತ್ ಕೂಡ ದೆಹಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 8 ವರ್ಷಗಳ ನಂತರ ಪಂತ್ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅತ್ಯಂತ ಕಿರಿಯ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ ಎನ್ನುವುದು ಕೂಡ ವಿಶೇಷವಾಗಿದೆ. ಆಯುಷ್ ಬದೋನಿ ಈ ತಂಡದ ನಾಯಕರಾಗಿದ್ದಾರೆ.
ವಿರಾಟ್ ಕೊಹ್ಲಿ ಆಡುವುದು ಅನುಮಾನ?
ಆದರೆ, ಸೌರಾಷ್ಟ್ರ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಸಿಡ್ನಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಕುತ್ತಿಗೆ ಉಳುಕಿತ್ತು. ಹೀಗಾಗಿ ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದಕ್ಕಾಗಿ ವಿರಾಟ್ ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಾರೆ. ವಿರಾಟ್ ಫಿಟ್ ಆಗದೇ ಇದ್ದರೆ ಈ ಪಂದ್ಯದಲ್ಲಿ ಆಡುವುದಿಲ್ಲ. ಆದರೆ ತಂಡದೊಂದಿಗೆ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಮಾತ್ರ ಖಚಿತ ಎನ್ನಲಾಗುತ್ತಿದೆ.
ಡೆಲ್ಲಿ ಸಂಭಾವ್ಯ ತಂಡ
ಸನತ್ ಸಾಂಗ್ವಾನ್,ಅನುಜ್ ರಾವತ್,ಯಶ್ ಧುಲ್,ವಿರಾಟ್ ಕೊಹ್ಲಿ,ಆಯುಷ್ ಬದೋನಿ (ನಾಯಕ),ರಿಷಭ್ ಪಂತ್,ಹಿಮ್ಮತ್ ಸಿಂಗ್,ಸುಮಿತ್ ಮಾಥುರ್,ಮನಿ ಗ್ರೆವಾಲ್,ಸಿಮರ್ಜೀತ್ ಸಿಂಗ್, ಸಿದ್ಧಾಂತ್ ಶರ್ಮಾ.