ಬೆಂಗಳುರು : ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ 15 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಬೌಲರ್‌ಗಳನ್ನು ಎದುರಿಸಿದ್ದಾರೆ. ಅವರಿಗೆ ಕೆಲವೊಂದು ಸ್ಪಿನ್ ಬೌಲರ್ಗಳು ಬಿಟ್ಟರೆ ಮಿಕ್ಕವರೆಲ್ಲ ಲೆಕ್ಕಕ್ಕೇ ಇಲ್ಲ. ಇದೀಗ ಐಪಿಎಲ್ 2025 ಟೂರ್ನಿಗೆ ಸಜ್ಜಾಗುತ್ತಿರುವ ಕೊಹ್ಲಿ, ತನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ವೇಗಿಯ ಹೆಸರನ್ನು ಹೇಳಿದ್ದಾರೆ. ಆದರೆ ಅವರು ಹೇಳಿದ್ದು ಭಾರತ ತಂಡದ ಬೌಲರ್ ಎಂಬುದು ಅಚ್ಚರಿ.
ಜಸ್‌ಪ್ರೀತ್ ಬುಮ್ರಾ ವಿಶ್ವದ ಶ್ರೇಷ್ಠ ವೇಗದ ಬೌಲರ್ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಭಾರತ ತಂಡದಲ್ಲಿ ಜೊತೆಯಾಗಿ ಆಡಿದರೂ, ಐಪಿಎಲ್‌ನಲ್ಲಿ ಪರಸ್ಪರ ಆಡುತ್ತಿದ್ದಾರೆ. ಈ ಹಿಂದೆ ಐಪಿಎಲ್‌ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಉತ್ತಮ ಹೆಡ್-ಟು-ಹೆಡ್ ರೆಕಾರ್ಡ್ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಜಸ್‌ಪ್ರೀತ್ ಬುಮ್ರಾ ಬಗ್ಗೆ ಮಾತನಾಡುತ್ತ, “ಮೂರೂ ಸ್ವರೂಪಗಳಲ್ಲಿ ಜಸ್‌ಪ್ರೀತ್ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಐಪಿಎಲ್‌ನಲ್ಲಿ ಅವರು ನನ್ನನ್ನು ಹಲವು ಬಾರಿ ಔಟ್ ಮಾಡಿದ್ದಾರೆ. ಹಾಗೆಯೇ ಐಪಿಎಲ್ ಟೂರ್ನಿಯಲ್ಲಿ ಅವರ ಎದುರು ನಾನು ಯಶಸ್ಸು ಕಂಡಿದ್ದೇನೆ. ಅವರನ್ನು ಎದುರಿಸುವುದು ಯಾವಾಗಲೂ ಸವಾಲಿನ ಕೆಲಸ ” ಎಂದು ಹೇಳಿದ್ದಾರೆ.

“ನೆಟ್ಸ್‌ನಲ್ಲಿ ನಾವು ಪರಸ್ಪರ ಪೈಪೋಟಿ ನಡೆಸುತ್ತೇವೆ. ಪಂದ್ಯವಿರುವ ಭಾವನೆ ನೆಟ್ಸ್‌ನಲ್ಲಿ ಸಹ ಇರುತ್ತದೆ. ನಾನು ಚೆಂಡನ್ನು ಹೊಡೆದು ರನ್ ಗಳಿಸಬೇಕು, ಅವರು ನನ್ನನ್ನು ಔಟ್ ಮಾಡಬೇಕು . ಇದು ಯಾವಾಗಲೂ ಸವಾಲು ಹಾಗೂ ರೋಮಾಂಚನಕಾರಿಯಾಗಿರುತ್ತದೆ,” ಎಂದು ಕೊಹ್ಲಿ ಹೇಳಿದ್ದಾರೆ.
2013ರಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಮ್ರಾ ಕೊಹ್ಲಿಯನ್ನು ಮೊದಲ ಬಾರಿಗೆ ಔಟ್ ಮಾಡಿದ್ದರು. ಐಪಿಎಲ್‌ನಲ್ಲಿ ಬುಮ್ರಾ ಒಟ್ಟು 5 ಬಾರಿ ಕೊಹ್ಲಿಯನ್ನು ವಿಕೆಟ್ ಕಿತ್ತುಕೊಂಡಿದ್ದಾರೆ. ಆಶಿಶ್ ನೆಹ್ರಾ 6 ಮತ್ತು ಸಂದೀಪ್ ಶರ್ಮಾ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿರುವ ಬೌಲರ್‌ಗಳಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಮತ್ತು ಬುಮ್ರಾ ಒಟ್ಟು 16 ಬಾರಿ ಮುಖಾಮುಖಿಯಾಗಿದ್ದಾರೆ. ಈ ಪಂದ್ಯಗಳಲ್ಲಿ, ಆರ್‌ಸಿಬಿ ಮಾಜಿ ನಾಯಕ ಕೊಹ್ಲಿ 140 ರನ್ ಗಳಿಸಿದ್ದು, 147ರ ಸ್ಟ್ರೈಕ್‌ರೇಟ್‌ನಲ್ಲಿ 15 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಅತಿ ಹೆಚ್ಚು ಔಟ್ ಮಾಡಿದ ಬೌಲರ್‌ಗಳಲ್ಲಿ ಜೋಷ್ ಹೇಝಲ್‌ವುಡ್, ಆದಿಲ್ ರಶೀದ್ ಹಾಗೂ ಟಿಮ್ ಡೇವಿಡ್ 11 ಬಾರಿ ಔಟ್ ಮಾಡಿದ್ದಾರೆ. ಮೊಯೀನ್ ಅಲಿ ಮತ್ತು ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ 10 ಬಾರಿ ಕೊಹ್ಲಿಯನ್ನು ವಿಕೆಟ್ ಕಳೆದುಕೊಂಡಿದ್ದಾರೆ.