ಮೀರತ್: ವಾಣಿಜ್ಯ ನೌಕಾ ಅಧಿಕಾರಿಯೊಬ್ಬರನ್ನು ಕೊಲೆಗೈದು(Murder), ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಡ್ರಮ್ ನೊಳಗೆ ತುಂಬಿ, ಅದರ ಮೇಲೆ ಸಿಮೆಂಟ್ ಹಾಕಿ ಮುಚ್ಚಿರುವಂಥ ಬೆಚ್ಚಿಬೀಳಿಸುವ ಅಪರಾಧ ಕೃತ್ಯವೊಂದು(Crime News) ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಇನ್ನೂ ಅಚ್ಚರಿಯೆಂದರೆ, ಈ ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ, ಆ ನೌಕಾ ಅಧಿಕಾರಿಯ ಪತ್ನಿ ಮತ್ತು ಆಕೆಯ ಪ್ರಿಯಕರ!
ವಾಣಿಜ್ಯ ನೌಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಸೌರಭ್ ರಜಪೂತ್ ಅವರೇ ಕೊಲೆಯಾದ ವ್ಯಕ್ತಿ. ಈ ಆಘಾತಕಾರಿ ಅಪರಾಧ ಪ್ರಕರಣದ ಹಿಂದೆ ಇರುವುದು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ನಡುವಿನ ವಿವಾಹೇತರ ಸಂಬಂಧ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಪಾವಧಿಯ ಸಂತೋಷ
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016ರಲ್ಲಿ ವಿವಾಹವಾದರು. ಅವರದ್ದು ಪ್ರೇಮ ವಿವಾಹವಾಗಿತ್ತು. ಪತ್ನಿ ಮುಸ್ಕಾನ್ ಜೊತೆ ಹೆಚ್ಚು ಸಮಯ ಕಳೆಯಲು ಉತ್ಸುಕರಾಗಿದ್ದ ಸೌರಭ್ ತಮ್ಮ ಮರ್ಚೆಂಟ್ ನೇವಿ ಕೆಲಸವನ್ನು ತೊರೆದರು. ಆದರೆ, ಪ್ರೇಮ ವಿವಾಹ ಮತ್ತು ಕೆಲಸವನ್ನು ತೊರೆಯುವ ಅವರ ಹಠಾತ್ ನಿರ್ಧಾರವು ಅವರ ಕುಟುಂಬಕ್ಕೆ ರುಚಿಸಿರಲಿಲ್ಲ. ಹೀಗಾಗಿ ಮನೆಯಲ್ಲಿ ಮನಸ್ತಾಪ, ಘರ್ಷಣೆ ಆರಂಭವಾಯಿತು. ಜಗಳ ಹೆಚ್ಚಾದ ಕಾರಣ ಮನೆ ಬಿಟ್ಟು ಹೋಗಲು ನಿರ್ಧರಿಸಿದ ಸೌರಭ್, ತಮ್ಮ ಪತ್ನಿ ಮುಸ್ಕಾನ್ ರನ್ನು ಕರೆದುಕೊಂಡು ಹೋಗಿ ಬಾಡಿಗೆ ಮನೆ ಮಾಡಿಕೊಂಡರು. 2019ರಲ್ಲಿ, ಮುಸ್ಕಾನ್ ಮತ್ತು ಸೌರಭ್ ದಂಪತಿಗೆ ಹೆಣ್ಣು ಮಗು ಜನಿಸಿತು. ಆದರೆ ಆ ಸಂತೋಷವು ಅಲ್ಪಾವಧಿಯದ್ದಾಗಿತ್ತು. ಮುಸ್ಕಾನ್ ತನ್ನ ಸ್ನೇಹಿತ ಸಾಹಿಲ್ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ವಿಚಾರ ಸೌರಭ್‌ಗೆ ತಿಳಿಯಿತು. ಇದು ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಯಿತು. ಈ ಜಗಳವು ವಿಚ್ಛೇದನದ ಹಂತಕ್ಕೂ ಬಂತು. ಆದರೆ, ಸೌರಭ್ ತಮ್ಮ ಮಗಳ ಭವಿಷ್ಯದ ಬಗ್ಗೆ ಯೋಚಿಸಿ, ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದರು. ಮತ್ತೆ ಮರ್ಚೆಂಟ್ ನೇವಿಗೆ ಸೇರ್ಪಡೆಯಾಗಿ, 2023ರಲ್ಲಿ ದೇಶವನ್ನು ತೊರೆದು ಕೆಲಸಕ್ಕೆ ಹೋದರು.
ಮಗಳ ಜನ್ಮದಿನದಂದೇ ಕೊಲೆ
ಫೆಬ್ರವರಿ 28ರಂದು ಸೌರಭ್ ಅವರ ಮಗಳಿಗೆ 6 ವರ್ಷ ತುಂಬಿತ್ತು.ಈ ಹಿನ್ನೆಲೆಯಲ್ಲಿ ಅವರು ಫೆಬ್ರವರಿ 24ರಂದು ಮನೆಗೆ ಮರಳಿದ್ದರು. ಆದರೆ, ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಸೇರಿ ಸೌರಭ್ ಬರುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಅವರ ಕೊಲೆಗೆ ಸಂಚು ರೂಪಿಸಿದ್ದರು. ಮುಸ್ಕಾನ್ ಮಾರ್ಚ್ 4 ರಂದು ಸೌರಭ್ ಅವರ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಳು. ಅವರು ನಿದ್ರೆಗೆ ಜಾರಿದೊಡನೆ, ಮುಸ್ಕಾನ್ ಮತ್ತು ಸಾಹಿಲ್ ಚಾಕುವಿನಿಂದ ಇರಿದು ಕೊಂದೇ ಬಿಟ್ಟರು. ಬಳಿಕ ಇಬ್ಬರೂ ಸೇರಿ ಸೌರಭ್ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಡ್ರಮ್ ನಲ್ಲಿ ಹಾಕಿ, ಒದ್ದೆ ಸಿಮೆಂಟ್ ನಿಂದ ಮುಚ್ಚಿದರು.
ಕೊಲೆ ವಿಚಾರ ಮುಚ್ಚಿಡಲು ಮತ್ತೊಂದು ನಾಟಕ
ನೆರೆಹೊರೆಯವರೆಲ್ಲ ಸೌರಭ್ ಬಗ್ಗೆ ವಿಚಾರಿಸಿದಾಗ ಮುಸ್ಕಾನ್, ಅವರು ಗಿರಿಧಾಮವೊಂದಕ್ಕೆ ಪ್ರವಾಸ ಹೋಗಿದ್ದಾರೆ ಎಂದೇ ಹೇಳತೊಡಗಿದಳು. ಅಷ್ಟೇ ಅಲ್ಲ, ಜನರನ್ನು ದಾರಿತಪ್ಪಿಸಲು ಮತ್ತು ಯಾವುದೇ ಅನುಮಾನ ಬರದಂತೆ ನೋಡಿಕೊಳ್ಳುವ ಸಲುವಾಗಿ, ಮುಸ್ಕಾನ್ ಮತ್ತು ಸಾಹಿಲ್, ಸೌರಭ್ ಅವರ ಮೊಬೈಲ್ ಫೋನ್ ನೊಂದಿಗೆ ಹಿಮಾಚಲ ಪ್ರದೇಶದ ಮನಾಲಿಗೆ ಪ್ರಯಾಣಿಸಿದರು. ಸೌರಭ್ ಅವರ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್ ಗಳಲ್ಲಿ ಮನಾಲಿಯ ವಿವಿಧ ಛಾಯಾಚಿತ್ರಗಳನ್ನೂ ಅಪ್ಲೋಡ್ ಮಾಡಲು ಆರಂಭಿಸಿದರು. ಆದರೆ, ಕುಟುಂಬ ಸದಸ್ಯರು ಎಷ್ಟೇ ಕರೆ ಮಾಡಿದರೂ ಸೌರಭ್ ಹಲವು ದಿನಗಳಿಂದ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಅವರ ಕುಟುಂಬ, ಪೊಲೀಸರಿಗೆ ದೂರು ನೀಡಿತು.
ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ಸೌರಭ್ ಅವರ ಕುಟುಂಬವು ದೂರು ದಾಖಲಿಸಿದ ನಂತರ, ಎಚ್ಚೆತ್ತ ಪೊಲೀಸರು ಮೊದಲಿಗೆ ಮುಸ್ಕಾನ್ ಮತ್ತು ಸಾಹಿಲ್ ರನ್ನು ವಶಕ್ಕೆ ಪಡೆದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಭೀಕರ ಕೊಲೆಯ ರಹಸ್ಯ ಹೊರಬಂತು. ದೇಹವನ್ನು ಏನು ಮಾಡಿದ್ದೀರಿ ಎಂದು ಪೊಲೀಸರು ಕೇಳಿದಾಗ, ಡ್ರಮ್ ನತ್ತ ಬೆರಳು ತೋರಿಸಿದ್ದರು. ಅಷ್ಟರಲ್ಲೇ ಡ್ರಮ್ ನೊಳಗೆ ಸಿಮೆಂಟ್ ಗಟ್ಟಿಯಾಗಿತ್ತು. ಕೊನೆಗೆ ಸುತ್ತಿಗೆ ಮತ್ತು ಉಳಿಯನ್ನು ಬಳಸಿ ಆ ಸಿಮೆಂಟ್ ಅನ್ನು ಮುರಿಯಲು ನಡೆಸಿದ ಪ್ರಯತ್ನ ವಿಫಲವಾಯಿತು. ಸೌರಭ್ ಅವರ ದೇಹದ ತುಂಡುಗಳಿದ್ದ ಡ್ರಮ್ ಅನ್ನು ಶವಾಗಾರಕ್ಕೆ ಸಾಗಿಸಲಾಯಿತು. ಡ್ರಿಲ್ ಯಂತ್ರವನ್ನು ಬಳಸಿ ಕೊನೆಗೂ ಕೊಲೆಯಾದ 14 ದಿನಗಳ ನಂತರ ಸೌರಭ್ ಅವರ ಅವಶೇಷಗಳನ್ನು ಹೊರತೆಗೆಯಸಲಾಯಿತು. ಇಷ್ಟೆಲ್ಲ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಪೊಲೀಸರೇ ಸುಸ್ತಾಗಿ ಹೋಗಿದ್ದರು.