ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿಯ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಉದ್ಘಾಟನಾ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಮಾರ್ಚ್ 22ರಂದು ನಡೆಯುವ ಈ ಪಂದ್ಯದಲ್ಲಿ ಆರ್‌ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸವಾಲನ್ನು ಎದುರಿಸಲಿದೆ. ಈಗಾಗಲೇ ಆಟಗಾರರು ಬೆಂಗಳೂರಿನಲ್ಲಿ ತೀವ್ರ ಅಭ್ಯಾಸ ನಡೆಸುತ್ತಿದ್ದಾರೆ. ತಂಡದ ಐಕಾನಿಕ್ ಹಾಗೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಶನಿವಾರ (ಮಾರ್ಚ್ 15) ಆರ್‌ಸಿಬಿ ಕ್ಯಾಂಪ್‌ಗೆ ಸೇರಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಕೊಹ್ಲಿ ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು.
ವಿರಾಟ್ ಕೊಹ್ಲಿ ತಂಡದೊಂದಿಗೆ ಸೇರಿಕೊಂಡ ವಿಚಾರವನ್ನು ನೇರವಾಗಿ ಹೇಳದೆ, ಅವರ ಟ್ಯಾಟೂಗಳ ಫೋಟೊ ಮಾತ್ರ ಪ್ರಕಟಿಸಿ, “ಇದು ಯಾರೆಂದು ಹೇಳಬಲ್ಲಿರಾ?” ಎಂದು ಪ್ರಶ್ನಿಸಿದ್ದರು. ಆದರೆ, ತಮ್ಮ ನೆಚ್ಚಿನ ಆಟಗಾರರನ್ನು ಅಭಿಮಾನಿಗಳು ಕ್ಷಣ ಮಾತ್ರದಲ್ಲಿ ಗುರುತಿಸಿ, ತಲೆಗೆ ಹುಳ ಬಿಟ್ಟ ಫ್ರಾಂಚೈಸಿಗೆ ಶಾಕ್ ನೀಡಿದ್ದಾರೆ.
ಕೊಹ್ಲಿಯ ಅಬ್ಬರದ ಪ್ರದರ್ಶನದ ನಿರೀಕ್ಷೆ
ಇತ್ತೀಚೆಗೆ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 5 ಪಂದ್ಯಗಳಲ್ಲಿ 54.50 ಸರಾಸರಿಯಲ್ಲಿ 218 ರನ್‌ಗಳಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಜೇಯ ಶತಕ ಬಾರಿಸಿ ಸಂಭ್ರಮಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ “ಕಿಂಗ್” ಕೊಹ್ಲಿ, ಕಳೆದ ಆವೃತ್ತಿಯಲ್ಲಿ 15 ಇನ್ನಿಂಗ್ಸ್‌ಗಳಲ್ಲಿ 741 ರನ್‌ಗಳನ್ನು ಬಾರಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ಬಾರಿಯೂ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
https://www.instagram.com/p/DHNhNqLCZZ4/?utm_source=ig_web_copy_link
ಅಭಿಮಾನಿಗಳ ನಿರೀಕ್ಷೆ
ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ತಂಡ ಕಪ್ ಗೆದ್ದು, ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಲಿದೆ ಎಂದಿದ್ದಾರೆ. ಹೌದು, ಈ ಬಾರಿಯದ್ದು 18ನೇ ಆವೃತ್ತಿಯಾಗಿದ್ದು, ಕೊಹ್ಲಿಯ ಜೆರ್ಸಿ ನಂಬರ್ ಕೂಡ 18 ಆಗಿದೆ. ಇದೇ ಕಾರಣವನ್ನಿಟ್ಟುಕೊಂಡು ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಕೊಹ್ಲಿಯ ಹೊಸ ಲುಕ್
ಪ್ರತಿ ಆವೃತ್ತಿಯ ಐಪಿಎಲ್‌ನಲ್ಲೂ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಈ ಬಾರಿಯೂ ನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಹಳೆ ಶೈಲಿಗಿಂತ ಸ್ವಲ್ಪ ಭಿನ್ನವಾಗಿರುವ ಕೊಹ್ಲಿಯ ಹೊಸ ಕೇಶವಿನ್ಯಾಸದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ,ರಜತ್ ಪಾಟೀದಾರ್, ಯಶ್ ದಯಾಳ್,ಜೋಶ್ ಹ್ಯಾಸಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್ಸ್ಟೋನ್, ರಸಿಕ್ ಸಲಾಂ, ಸುಯಶ್ ಶರ್ಮ, ಭುವನೇಶ್ವರ್ ಕುಮಾರ್,ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕರ, ಮೋಹಿತ್ ರಾಥೀ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.