ಅಮರಾವತಿ: ಚಳಿ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಎಸಿಯ ಅಗತ್ಯವಿರುವುದಿಲ್ಲ. ಹಾಗಾಗಿ ಕೆಲವರು ಎಸಿ ಆಫ್ ಮಾಡುತ್ತಾರೆ. ಆದರೆ, ಸೆಕೆ ಬಂದಾಗ ಎಸಿ ಇಲ್ಲದೆ ಒಂದು ದಿನವೂ ಇರುವುದು ಕಷ್ಟ. ಹಲವು ದಿನಗಳಿಂದ ಆಫ್ ಆಗಿದ್ದ ಎಸಿಯನ್ನು ಆನ್ ಮಾಡಲು ಹೋದ ವ್ಯಕ್ತಿಯೊಬ್ಬರು ಬೆಚ್ಚಿಬಿದ್ದ ಘಟನೆ ನಡೆದಿದೆ. ಎಸಿಯೊಳಗೆ ಹಾವೊಂದು ತನ್ನ 8-10 ಮರಿಗಳೊಂದಿಗೆ ಬೆಚ್ಚಗೆ ಮಲಗಿತ್ತು. ಸುಮಾರು ದಿನಗಳಿಂದ ಎಸಿ ಬಳಸದ ಕಾರಣ ಹಾವು ಅದರೊಳಗೆ ಹೊಕ್ಕು ಮೊಟ್ಟೆ ಇಟ್ಟು ಮರಿ ಮಾಡಿತ್ತು. ಎಸಿ ಆನ್ ಮಾಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಎಸಿಯೊಳಗೆ ಹಾವು ಮತ್ತು ಮರಿಗಳನ್ನು ನೋಡಿ ಶಾಕ್ ಆದ ಸತ್ಯನಾರಾಯಣ ತಕ್ಷಣ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾನೆ. ನಂತರ ಹಾವು ಹಿಡಿಯುವವರು ಬಂದು ಹಾವು ಮತ್ತು ಅದರ ಮರಿಗಳನ್ನು ಎಸಿಯಿಂದ ಎಚ್ಚರಿಕೆಯಿಂದ ತೆಗೆದಿದ್ದಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೂಡಲೇ ಇದು ವೈರಲ್ ಆಗಿದೆ. ಇದುವರೆಗೆ ಈ ವಿಡಿಯೊ 84 ಸಾವಿರಕ್ಕೂ ಹೆಚ್ಚು ವ್ಯೂಸ್ ಗಳಿಸಿದೆ ಮತ್ತು ಅನೇಕ ಜನರು ಅದನ್ನು ಲೈಕ್ ಮಾಡಿದ್ದಾರೆ. ವಿಡಿಯೊವನ್ನು ನೋಡಿದ ನೆಟ್ಟಿಗರು, “ಎಸಿಯನ್ನು ಆನ್ ಮಾಡುವ ಮೊದಲು ನಾವು ಕೂಡ ನೋಡಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ದೀರ್ಘಕಾಲದವರೆಗೆ ಬಳಸದಿರುವ ಎಲೆಕ್ಟ್ರಾನಿಕ್ ಸಾಧನಗಳ ಒಳಗೆ ಧೂಳು ತುಂಬಿರುವುದು ಮಾತ್ರವಲ್ಲ, ಸಣ್ಣ ಜೀವಿಗಳು ಪ್ರವೇಶಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಅವುಗಳನ್ನು ಆನ್ ಮಾಡುವ ಮೊದಲು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮುಖ್ಯ. ಇದರಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದಿದ್ದಾರೆ.
ಹಿಂದೆಯೂ ನಡೆದಿತ್ತು
ಇತ್ತೀಚೆಗೆ ತೆಲಂಗಾಣದ ನಲ್ಗೊಂಡದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವೊಂದು ಮಲಗಿದ್ದು, ಇದನ್ನು ಕಂಡು ಭಯಭೀತರಾದ ವಿದ್ಯಾರ್ಥಿಗಳು ಅದರ ಮೇಲೆ ದಾಳಿ ಮಾಡಿ ಕೊಂದುಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾವಿನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿ ಹಾವನ್ನು ಗಾಯಗೊಳಿಸುವುದು ಸೆರೆಯಾಗಿದೆ. ಈ ದಾಳಿಯಲ್ಲಿ ಕೋಲುಗಳಿಂದ ಕ್ರೂರವಾಗಿ ಥಳಿಸಿದ ಕಾರಣ ಹಾವು ಅಲ್ಲೇ ಸಾವನ್ನಪ್ಪಿದೆ. ನಂತರ ಸತ್ತ ಹಾವನ್ನು ಗೋಣಿ ಚೀಲದಲ್ಲಿ ಹಾಕಿ ಗ್ರಂಥಾಲಯದಿಂದ ಹೊರಗೆ ಹಾಕಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದುಹಾಕಿದ್ದಾರೆ ಎನ್ನಲಾಗಿದೆ.
ಇಂತಹ ಘಟನೆಗಳು ನಮ್ಮ ಸುತ್ತಲೂ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ದೀರ್ಘಕಾಲದವರೆಗೆ ಬಳಸದಿರುವ ಸಾಧನಗಳನ್ನು ಪರಿಶೀಲಿಸದೆ ಬಳಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ.