ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಜನರು ವಿಚಿತ್ರ ರೀಲ್ಸ್ ಮಾಡುತ್ತಾರೆ. ಬಿಸಿ ಟೀಗೆ ಮ್ಯಾಗಿ ಹಾಕುವುದು, ಆಮ್ಲೆಟ್ಗೆ ಬಿಸ್ಕೆಟ್ ಸೇರಿಸುವುದು ಹೀಗೆ ವಿಭಿನ್ನ ನಳಪಾಕದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. ಟೀ ಆಯ್ತು, ಚಾಕೊಲೆಟ್ ಆಯ್ತು, ಈಗ ಕಾಫಿಯ ವಿಚಿತ್ರವಾದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮರ್ ಕ್ಯಾಲ್ವಿನ್ ಲೀ ಕಾಫಿಗೆ ಸಕ್ಕರೆ ಮತ್ತು ಹಾಲು ಸೇರಿಸುವ ಬದಲು ಚೀಸ್ ಮಿಕ್ಸ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಂಗಾಪುರದ ಖ್ಯಾತ ಇನ್ಸ್ಟಾಗ್ರಾಮರ್ ಕ್ಯಾಲ್ವಿನ್ ಲೀ ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಆಗಾಗ್ಗೆ ವಿಚಿತ್ರವಾದ ಆಹಾರ ತಯಾರಿಕೆಯ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾನೆ. ಇತ್ತೀಚೆಗೆ ಅವನು ಚೀಸ್ ಕಾಫಿ ತಯಾರಿಸಿ ಅದರ ರುಚಿ ನೋಡಿದ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಕ್ಯಾಲ್ವಿನ್ ಲೀ ಬಿಸಿ ಕಾಫಿಗೆ ಒಂದು ಪೀಸ್ ಚೀಸ್ ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸವಿದಿದ್ದಾನೆ. ಅವನು ಈ ಕಾಫಿ ತುಂಬಾ ಟೇಸ್ಟಿ ಆಗಿದೆ ಎಂದು ಹೇಳಿದ್ದಾನೆ. ಈ ವಿಡಿಯೊಗೆ ಈಗಾಗಲೇ 25,000 ಕ್ಕೂ ಹೆಚ್ಚು ವ್ಯೂಸ್ ಸಿಕ್ಕಿದೆ. ನೆಟ್ಟಿಗರು ಕೂಡ ಈ ಚೀಸ್ ಕಾಫಿಯನ್ನು “ಯಮ್ಮಿ” ಎಂದು ಕರೆದಿದ್ದಾರೆ.
ಲೀ ಇಂತಹ ವಿಚಿತ್ರವಾದ ಪಾಕವಿಧಾನದ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಅವನು ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಜಾಮೂನಿನ ಪರೋಟಾ, ಓರಿಯೋ ವೈನ್, ಪಾನ್ ಆಮ್ಲೆಟ್ ಇತ್ಯಾದಿ ಹಲವು ಬಗೆಯ ಆಹಾರ ತಯಾರಿಕೆಯ ವಿಡಿಯೊಗಳನ್ನು ಹಂಚಿಕೊಂಡಿದ್ದಾನೆ. ಇತ್ತೀಚೆಗಷ್ಟೇ ಅವನು ಕಾರ್ನ್ ಹಾಕಿ ಕಾಫಿ ತಯಾರಿಸಿದ ವಿಡಿಯೊ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಹಾಲು ಮತ್ತು ಸಕ್ಕರೆ ಹಾಕಿ ತಯಾರಿಸಿದ ಕಾಫಿಗೆ ಕಾರ್ನ್ ಹಾಕಿದ ವಿಡಿಯೊ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿತ್ತು.
ಇನ್ನೊಂದು ರೀಲ್ಸ್ ನೋಡಿ
ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಕ್ಯಾಲ್ವಿನ್ ಲೀ ‘ಹೆಚ್ಚುವರಿ ಪ್ರೋಟೀನ್’ ಡೋಸ್ನೊಂದಿಗೆ ಒಂದು ಕಪ್ ಕಾಫಿಯನ್ನು ತಯಾರಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಅವನು ಕಾಫಿಯನ್ನು ಕುಡಿಯುವ ಮೊದಲು ಅದಕ್ಕೆ ಬೇಯಿಸಿದ ಬೀನ್ಸ್ ಕಾಳುಗಳನ್ನು ಹಾಕಿ ಅದನ್ನು ಚೆನ್ನಾಗಿ ಕಲಕಿ ಕುಡಿದಿದ್ದಾನೆ. ಈ ಪಾಕವಿಧಾನವು ಸುಲಭವಾಗಿದ್ದರೂ, ವಿಚಿತ್ರವಾಗಿತ್ತು. ‘ಬೇಕ್ಡ್ ಬೀನ್ಸ್ ಕಾಫಿ’ ತಯಾರಿಸಿ ಅದರ ರುಚಿ ನೋಡಿ ತುಂಬಾ ಚೆನ್ನಾಗಿದೆ ಎಂದು ಕೂಡ ಹೇಳಿದ್ದಾನೆ. ಲೀ ತಯಾರಿಸಿದ ಈ ಕಾಫಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. “ಆರೋಗ್ಯಕರ ಉಪಾಹಾರ” ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಕ್ಯಾಲ್ವಿನ್ ಲೀನಂತಹ ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವಿಚಿತ್ರ ಮತ್ತು ಸೃಜನಶೀಲ ಆಹಾರ ಪ್ರಯೋಗಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇಂತಹ ವಿಡಿಯೊಗಳು ನೆಟ್ಟಿಗರಿಗೆ ಮನರಂಜನೆ ನೀಡುವುದರ ಜೊತೆಗೆ, ಆಹಾರದ ಹೊಸ ಹೊಸ ಪ್ರಯೋಗಗಳ ಬಗ್ಗೆ ಚಿಂತನೆಗೆ ದಾರಿ ಮಾಡಿಕೊಡುತ್ತವೆ.