ವಾಷಿಂಗ್ಟನ್: ಸೂಕ್ತ ದಾಖಲೆಗಳಿಲ್ಲದ ಕಾರಣ ಸಾಕು ನಾಯಿಗೆ ಅಂತಾರಾಷ್ಟ್ರೀಯ ವಿಮಾನ ಪ್ರವೇಶಿಸಲು ಅನುಮತಿ ನೀಡಲಾಗದು ಎಂದಿದ್ದಕ್ಕೆ ಮಹಿಳೆಯೊಬ್ಬಳು ತನ್ನ ನಾಯಿಯನ್ನು ವಿಮಾನ ನಿಲ್ದಾಣದ ಟಾಯ್ಲೆಟ್ ನೊಳಗೆ ಹಾಕಿ ಮುಳುಗಿಸಿ ಕೊಂದಿದ್ದಾರೆ. ಒರ್ಲಾಂಡೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ(Viral News) ನಡೆದಿದ್ದು, ಆರೋಪಿ ಲೂಯಿಸಿಯಾನಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ಕೆನ್ನರ್ ಎಂಬ ಪ್ರದೇಶದ ನಿವಾಸಿಯಾಗಿರುವ ಲೂಯಿಸಿಯಾನಳನ್ನು ಲೇಕ್ ಕೌಂಟಿಯಲ್ಲಿ ಬಂಧಿಸಲಾಗಿದ್ದು, ಪ್ರಾಣಿ ದೌರ್ಜನ್ಯದ ಆರೋಪವನ್ನು ಹೊರಿಸಲಾಗಿದೆ. ಬಳಿಕ ಆಕೆಯನ್ನು 5,000 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈವಿನ್ ಎಂಬ ಹೆಸರಿನ 9 ವರ್ಷದ ಮಿನಿಯೇಚರ್ ಸ್ಕ್ನೌಜರ್ ಜಾತಿಯ ನಾಯಿಯು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿರುವ ಕಸದ ಚೀಲದಲ್ಲಿ ಪತ್ತೆಯಾಗಿತ್ತು. ಈ ಹಿಂದೆ ಅಲ್ಲಿ ಮಹಿಳೆಯೊಬ್ಬಳು ನೆಲದಲ್ಲಿನ ನೀರು ಮತ್ತು ನಾಯಿಯ ಆಹಾರವನ್ನು ಸ್ವಚ್ಛಗೊಳಿಸುವುದನ್ನು ಅಲ್ಲಿನ ಸಿಬ್ಬಂದಿ ನೋಡಿದ್ದರು. ಬೇರೆಡೆಗೆ ಸ್ವಚ್ಛತಾ ಕಾರ್ಯಕ್ಕೆ ಹೋಗಿ 20 ನಿಮಿಷಗಳ ಬಳಿಕ ವಾಪಸ್ ಬಂದಾಗ ಸಿಬ್ಬಂದಿಗೆ, ಕಸದ ಚೀಲದಲ್ಲಿ ನಾಯಿಮರಿಯ ಶವವಿರುವುದು ಕಂಡುಬಂದಿತ್ತು. ಅದರ ಜೊತೆಗೆ ನಾಯಿಯ ಕಾಲರ್, ರೇಬೀಸ್ ಟ್ಯಾಗ್, ನಾಯಿಯ ಪ್ರಯಾಣ ಬ್ಯಾಗ್ ಇತ್ತು. ಜೊತೆಗೆ, ಟ್ಯಾಗ್ ವೊಂದರಲ್ಲಿ ಮಹಿಳೆಯೊಬ್ಬರ ಹೆಸರು ಮತ್ತು ಫೋನ್ ನಂಬರ್ ಕೂಡ ಸಿಕ್ಕಿತ್ತು.
ಕೂಡಲೇ ಅಧಿಕಾರಿಗಳು ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಗ ನಾಯಿಯನ್ನು ಹಿಡಿದುಕೊಂಡಿದ್ದ ಮಹಿಳೆಯು ವೈಮಾನಿಕ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತನಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂತರ ಅವಳು ನೇರವಾಗಿ ಶೌಚಾಲಯವನ್ನು ಪ್ರವೇಶಿಸಿದ್ದು, ಸುಮಾರು 20 ನಿಮಿಷಗಳ ನಂತರ ಏಕಾಂಗಿಯಾಗಿ ಹೊರಬಂದಿರುವುದೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ನಂತರ ಆಕೆ ಟರ್ಮಿನಲ್ ನಿಂದ ನಿರ್ಗಮಿಸಿ, ಭದ್ರತಾ ತಪಾಸಣೆ ಮುಗಿಸಿ, ಕೊಲಂಬಿಯಾದ ಬೊಗೊಟ್‌ಗೆ ಹೋಗುವ ವಿಮಾನವನ್ನು ಹತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ, ಅಂತರಾಷ್ಟ್ರೀಯ ಪ್ರಯಾಣಕ್ಕೆ ಅಗತ್ಯವಾದ ಆರೋಗ್ಯ ದಾಖಲೆಗಳ ಕೊರತೆಯಿಂದಾಗಿ ನಾಯಿ ಟೈವಿನ್ ಅನ್ನು ವಿಮಾನದೊಳಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಸಿಬ್ಬಂದಿಯು ಮಹಿಳೆಗೆ ತಿಳಿಸಿದ್ದರು. ಅಮೆರಿಕದಿಂದ ಕೊಲಂಬಿಯಾಗೆ ಪ್ರಯಾಣಿಸುವ ನಾಯಿಗಳು ಪಶುವೈದ್ಯರಿಂದ ನೀಡಲಾದ ಆರೋಗ್ಯ ಪ್ರಮಾಣಪತ್ರ ಮತ್ತು ಮಾನ್ಯ ರೇಬೀಸ್ ಲಸಿಕೆ ಹಾಕಿರುವ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ. ಆದರೆ, ಈ ಮಹಿಳೆಯು ಯಾವ ದಾಖಲೆಗಳನ್ನೂ ತಾರದ ಹಿನ್ನೆಲೆಯಲ್ಲಿ ನಾಯಿಯನ್ನು ಒಳಗೆ ಬಿಟ್ಟುಕೊಳ್ಳಲಾಗದು ಎಂದು ಸಿಬ್ಬಂದಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆ ನಾಯಿಮರಿಯನ್ನು ಟಾಯ್ಲೆಟ್ ಗೆ ಒಯ್ದು, ಅದರ ನೀರಿನಲ್ಲಿ ಮುಳುಗಿಸಿ ಕೊಂದು, ನಂತರ ಅದರ ಮೃತದೇಹವನ್ನು ಕಸದ ಚೀಲಕ್ಕೆ ಎಸೆದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಇದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಆ ಮುಗ್ಧ ಪ್ರಾಣಿಯ ಕ್ರೂರ ಮತ್ತು ಅನಗತ್ಯ ಸಾವಿಗೆ ಕಾರಣವಾಯಿತು” ಎಂದು ಒರ್ಲಾಂಡೋ ಪೊಲೀಸ್ ಇಲಾಖೆ ಅಫಿಡವಿಟ್ ನಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದು, ಆರೋಪ ಸಾಬೀತಾದರೆ ಫ್ಲೋರಿಡಾದ ಪ್ರಾಣಿ ಕ್ರೌರ್ಯ ಕಾನೂನಿನ ಅಡಿಯಲ್ಲಿ ಮಹಿಳೆಗೆ ನ್ಯಾಯಾಲಯವು ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆ ಇದೆ.