ಕಾಠ್ಮಂಡು : ನೇಪಾಳ-ಭಾರತದ ಗಡಿ ಭಾಗದಲ್ಲಿರುವ ಬಾರಾ ಜಿಲ್ಲೆಯಲ್ಲಿ ‘ಜೆನ್ ಝೀ’ ಯುವಕರು ಹಾಗೂ ಕಮ್ಯುನಿಸ್ವ್ ಪಕ್ಷದ ಯುವಕರ ನಡುವೆ ಘರ್ಷಣೆ ನಡೆದಿದ್ದು, ಮತ್ತೆ ದಂಗೆ ಭುಗಿಲೆದ್ದಿದೆ. ಇದರ ಪರಿಣಾಮ ಬಾರಾ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಾರಾ ಜಿಲ್ಲೆಯ ಸೈಮಾರ ವಿಮಾನ ನಿಲ್ದಾಣದ ಬಳಿ ನೂರಾರು ಯುವಕರು ಸೇರಿದ್ದು, ಕಮ್ಯುನಿಸ್ಟ್ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ 12.30ರಿಂದ ಗುರುವಾರ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸಿಪಿಎನ್ (ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ) ಯುಎಂಎಲ್ ಪ್ರಧಾನ ಕಾರ್ಯದರ್ಶಿ ಶಂಕರ್ ಪೋಖರೆಲ್ ಮತ್ತು ಪಕ್ಷದ ಯುವ ನಾಯಕ ಮಹೇಶ್ ಬಾಸ್ನೆಟ್ ಅವರನ್ನು ಹೊತ್ತ ಬುದ್ಧ ಏರ್ ವಿಮಾನವು ಕಾಠ್ಮಂಡುವಿನಿಂದ ಸೈಮಾರಗೆ ತೆರಳುತ್ತಿದ್ದಾಗ ಘರ್ಷಣೆ ಭುಗಿಲೆದ್ದಿದೆ.
ಏನಿದು ʻಜೆನ್ ಝೀ ದಂಗೆʼ?
ಕಳೆದ ಸೆಪ್ಟೆಂಬರ್ 8 ಮತ್ತು 9 ರಂದು, ಹಿಂದಿನ ಸರ್ಕಾರವು ಸಾಮಾಜಿಕ ಮಾಧ್ಯಮದ ಮೇಲೆ ವಿಧಿಸಿದ್ದ ಸಂಕ್ಷಿಪ್ತ ನಿಷೇಧದ ವಿರುದ್ಧ ಭುಗಿಲೆದ್ದ ಜಿನ್ಜಿ ದಂಗೆಯಲ್ಲಿ ಕನಿಷ್ಠ 76 ಜನರು ಸಾವನ್ನಪ್ಪಿದ್ದರು. ಸೋಶಿಯಲ್ ಮೀಡಿಯಾ ಬಳಕೆ ಮೇಲೆ ಹೇರಿದ್ದ ನಿಷೇಧ ಕ್ರಮವು ಕೇವಲ ಒಂದು ನೆಪವಾಗಿದ್ದರೂ, ವರ್ಷಗಳ ಆರ್ಥಿಕ ಹಿಂಜರಿತ ಮತ್ತು ಬೇರೂರಿದ್ದ ಭ್ರಷ್ಟಾಚಾರದಿಂದಾಗಿ ಯುವಕರು ಪ್ರತಿಭಟನೆ ನಡೆಸಿದರು. ಈ ದಂಗೆಯ ಸಮಯದಲ್ಲಿ ಸಂಸತ್ತು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದ್ದು, ನಾಲ್ಕು ಬಾರಿ ಪ್ರಧಾನಿಯಾಗಿದ್ದ 73 ವರ್ಷದ ಓಲಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. ನಂತರ, 73 ವರ್ಷದ ಸುಶೀಲಾ ಕಾರ್ಕಿ ಅವರನ್ನು ಪ್ರಧಾನಿಯಾಗಿ ನೇಮಿಸಲಾಯಿತು.
ಇದನ್ನೂ ಓದಿ : ‘ಡೆವಿಲ್’ ಟ್ರೈಲರ್ ಡಿಸೆಂಬರ್ 1ಕ್ಕೆ? ದರ್ಶನ್ ಅನುಪಸ್ಥಿತಿ.. ‘ಡಿ’ ಬಳಗಕ್ಕೆ ಯಾವ್ ಗತಿ?



















