ಢಾಕಾ: ಬಾಂಗ್ಲಾದೇಶ ಮತ್ತೊಮ್ಮೆ ಹಿಂಸಾಚಾರಕ್ಕೆ ತನ್ನನ್ನು ತಾನು ತೆರೆದುಕೊಂಡಿದೆ. ಮೀಸಲಾತಿ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಬಾಂಗ್ಲಾ ಈಗ ಮತ್ತೊಂದು ಹಂತದ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ.
ಶೇಖ್ ಹಸೀನಾ ವಿರುದ್ಧ ಶುರುವಾಗಿದ್ದ ಪ್ರತಿಭಟನೆ ಹಿಂಸಾತ್ಮಕ ಹಾದಿ ತುಳಿಯುತ್ತಿದ್ದಂತೆ ಅವರು ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಈಗ ಮತ್ತೆ ಬಾಂಗ್ಲಾ ದೇಶದ ಅಧ್ಯಕ್ಷರ ವಿರುದ್ಧ ಅಲ್ಲಿನ ಜನರು ಬೀದಿಗೆ ಇಳಿದಿದ್ದಾರೆ.
ಬಾಂಗ್ಲಾ ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ವಿರುದ್ಧ ಮೀಸಲಾತಿ ವಿರೋಧಿ ವಿದ್ಯಾರ್ಥಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಬಾಂಗ್ಲಾ ದೇಶದ ಅಧ್ಯಕ್ಷೀಯ ಕಚೇರಿಯಾದ ಬಾಂಗಾ ಭಬನ್‌ಗೆ ಲಗ್ಗೆ ಇಟ್ಟಿರುವ ಪ್ರತಿಭಟನಾಕಾರರು, ಅಧ್ಯಕ್ಷೀಯ ಅರಮನೆ ಸುತ್ತುವರೆದು, ದಿಗ್ಬಂಧನ ವಿಧಿಸಿದ್ದಾರೆ.
ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಇರುವ ಶಹೀದ್ ಮಿನಾರ್‌ನಲ್ಲಿ ಮಂಗಳವಾರ ರಾತ್ರಿ ಸಭೆ ಸೇರಿದ ಮೀಸಲಾತಿ ವಿರೋಧಿ ವಿದ್ಯಾರ್ಥಿ ಪ್ರತಿಭಟನಾಕಾರರರು, ಬಾಂಗ್ಲಾ ಅಧ್ಯಕ್ಷರ ರಾಜೀನಾಮೆ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಬಾಂಗ್ಲಾ ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಪ್ತ ಎಂದು ಆಪಾದನೆ ಮಾಡಿರುವ ಪ್ರತಿಭಟನಾಕಾರರು, ಶೇಖ್ ಹಸೀನಾ ಅವರು ಮುನ್ನಡೆಸುತ್ತಿದ್ದ ಸರ್ಕಾರಕ್ಕೆ ಮೊಹಮ್ಮದ್ ಶಹಾಬುದ್ದೀನ್ ಶ್ರೀರಕ್ಷೆಯಾಗಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.