ಕೋಲ್ಕತ್ತಾ: ಹೋಳಿ ಹಬ್ಬದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ(West Bengal Violence) ಬಿರ್ಭುಮ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇದು ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜಿಲ್ಲೆಯಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳ ತುಕಡಿಯನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಂಥಿಯಾ ಪಟ್ಟಣದಲ್ಲಿ ಶುಕ್ರವಾರ ಒಂದು ಗುಂಪು ಮತ್ತು ಮದ್ಯಸೇವನೆ ಮಾಡಿದ್ದ ಕೆಲವು ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಕೊನೆಗೆ ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿದೆ. ಘರ್ಷಣೆಯಲ್ಲಿ ಕೆಲವು ಸ್ಥಳೀಯರು ಗಾಯಗೊಂಡಿದ್ದಾರೆ. ನಂತರ, ಲಘು ಲಾಠಿಚಾರ್ಜ್ ನಡೆಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದರ ಬೆನ್ನಲ್ಲೇ, ವದಂತಿ ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಬಂಗಾಳ ಗೃಹ ಇಲಾಖೆಯು ಸೈಂಥಿಯಾದ ಐದು ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಇಂಟರ್ನೆಟ್ ಮತ್ತು ವಾಯ್ಸ್-ಓವರ್-ಇಂಟರ್ನೆಟ್ ಸೌಲಭ್ಯಗಳನ್ನು ಮಾರ್ಚ್ 17 ರವರೆಗೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಧ್ವನಿ ಕರೆಗಳು ಮತ್ತು ಎಸ್ಎಂಎಸ್ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಪತ್ರಿಕೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.
ಸೈಂಥಿಯಾ ಪುರಸಭೆ, ಹಟೋರಾ, ಮತ್ಪಾಲ್ಸಾ, ಹರಿಸಾರ, ಫರಿಯಾಪುರ್ ಮತ್ತು ಫುಲೂರುಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. “ನಿನ್ನೆ ಸಂಜೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ವದಂತಿ ಹಬ್ಬಿಸುವುದನ್ನು ತಡೆಯಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ತದನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಮಮತಾ ಸರ್ಕಾರದ ವಿರುದ್ಧ ಬಿಜೆಪಿಯ ‘ಬ್ಲಾಸ್ಟ್ ಫ್ಯಾಕ್ಟರಿ’ ವಾಗ್ದಾಳಿ
ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸರ್ಕಾರವು ಬಿರ್ಭುಮ್ ಜಿಲ್ಲೆಯನ್ನು “ಸ್ಫೋಟದ ಕಾರ್ಖಾನೆ” ಯಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದಾರೆ.
“ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ತೃಣಮೂಲ ಕಾಂಗ್ರೆಸ್ ನಾಯಕರು ಕೂಡ ಜಿಲೆಟಿನ್ ಕಡ್ಡಿಗಳೊಂದಿಗೆ ಸಿಕ್ಕಿಬಿದ್ದಿದ್ದರು. ಸ್ಫೋಟಕಗಳು ಸಹ ಪತ್ತೆಯಾಗಿದ್ದವು. ಸರ್ಕಾರವು ಬಿರ್ಭುಮ್ ಅನ್ನು ಸ್ಫೋಟದ ಕಾರ್ಖಾನೆಯಾಗಿ ಪರಿವರ್ತಿಸಿದೆ” ಎಂದು ಮಜುಂದಾರ್ ಹೇಳಿದ್ದಾರೆ. ರಾಜ್ಯ ಪೊಲೀಸರಿಗೆ ವೃತ್ತಿಪರತೆಯ ಕೊರತೆಯಿದೆ. ಅವರು ನಿಷ್ಕ್ರಿಯರಾಗಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.