ನಟ ವಿನೋದ್ ರಾಜ್ ಆರೋಗ್ಯ ಹದಗೆಟ್ಟ ಪರಿಣಾಮ ಮಂಗಳವಾರ (ನಿನ್ನೆ) ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ ಅವರಿಗೆ ಆಪರೇಷನ್ ಮಾಡಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಿನ್ನೆ ಬೆಳಿಗ್ಗೆ ವಿನೋದ್ ರಾಜ್ ಅವರಿಗೆ ಹೊಟ್ಟೆಯ ಭಾಗದಲ್ಲಿ ತೀವೃ ಥರದ ನೋವು ಕಾಣಿಸಿಕೊಂಡ ಪರಿಣಾಮ ನೆಲಮಂಗಲದ ವಿಪಿ ಮೆಗ್ನಸ್(VP Megnus Hospital) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಕರಳಿಗೆ ಸಂಬಂಧಿಸಿದಂತೆ ತೊಂದರೆ ಇರುವುದು ಕಂಡುಬಂದಿದೆ. ಹಾಗೆಯೇ ಬಿಟ್ಟರೆ ಅದು ಅಪಾಯದ ಹಂತ ತಲುಪುವ ಲಕ್ಷಣ ಕಂಡ ವೈದ್ಯರು, ಆ ಕೂಡಲೇ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆಯನ್ನು ವಿನೋದ್ ರಾಜ್ ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಅದರಂತೆ ನಿನ್ನೆ ಮಧ್ಯಾಹ್ನ ಕರಳಿಗೆ ಸಂಬಂಧಿಸಿದಂತೆ ಆಪರೇಷನ್ ಮಾಡಲಾಗಿದೆ.

ಕಳೆದ ಹನ್ನೊಂದು ವರ್ಷದ ಹಿಂದೆ ವಿನೋದ್ ರಾಜ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆ ಸೇರಿ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಅಂದು ಹೃದಯಕ್ಕೆ “ಸ್ಟಂಟ್” ಅಳವಡಿಸಿದ್ದರು. ಅದಾದ ಮೇಲೂ ಅವರೇನು ಸುಮ್ಮನೆ ಕೂತವರಲ್ಲ; ಬದಲಿಗೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲೇ ತೊಡಗಿಕೊಂಡು ದಣಿವರಿಯದವರಂತೆ ದುಡಿದು, ನೆಲಮಂಗಲದ ಸೋಲದೇವನ ಹಳ್ಳಿಯ ಬರಡು ಭೂಮಿ ಎಂಬಂತಿದ್ದ ಕಲ್ಲು ಬಂಡೆಗಳ ಹೊತ್ತ ತಮ್ಮ ಭೂಮಿಯಲ್ಲಿ ಬಂಗಾರದಂಥ ಬೆಳೆ ತೆಗೆದವರು. ಅಮ್ಮನ ಆರೈಕೆ ಮಾಡುತ್ತಾ, ಬಣ್ಣದ ನಂಟು ಕಳಚಿಕೊಂಡು, ಕೃಷಿಯನ್ನೇ ನೆಚ್ಚಿಕೊಂಡು ಬದುಕಿದವರು. ಅಲ್ಲಿ ಅನೇಕ ಮಂದಿಗೆ ಆಶ್ರಯ ಕೊಟ್ಟಿದ್ದಾರೆ. ತಾಯಿಯ ಆಸೆಯಂತೆ ಬಡವರಿಗಾಗಿ ತಮ್ಮ ಸ್ವಂತ ಜಾಗದಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ತಾವು ವಾಸವಿರುವ ಆ ಸೋಲದೇವನ ಹಳ್ಳಿಯ ಜನರ ಜಮೀನುಗಳ ವಿಚಾರದಲ್ಲಿ ನ್ಯಾಯ ಕೊಡಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇಂಥ ವ್ಯೆಕ್ತಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದಾಗ ನಿನ್ನೆ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಅಂದಹಾಗೆ, ವಿನೋದ್ ರಾಜ್ ಇತ್ತೀಚೆಗಷ್ಟೆ ತನ್ನ ಜೀವವೇ ಆಗಿದ್ದ ತಾಯಿಯನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದರು. ಇನ್ನೇನು ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಅವರ ಆರೋಗ್ಯ ಕೈಕೊಟ್ಟಿದೆ. ಸದ್ಯ ಶಸ್ತ್ರ ಚಿಕಿತ್ಸೆಯ ನಂತರ ಅವರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ತೋಟ-ಮನೆ ಎನ್ನುತ್ತಾ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಒತ್ತಡ ತಂದುಕೊಳ್ಳುವ ಇವರು ಇನ್ನು ಮುಂದಾದರೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ.
