ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ ಐಶ್ವರ್ಯ ಗೌಡ ಎಂಬಾಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಗೊಳಿಸಿರುವ ಪೊಲೀಸರು, ಮಾಜಿ ಸಚಿವ ವಿನಯ್ ಕುಲಕರ್ಣಿ ಕಾರ್ ಸೀಜ್ ಮಾಡಿದ್ದಾರೆ.
ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ವ್ಯವಹಾರಿಕ ಸಂಬಂಧ ಇದೆ ಅನ್ನೋದಕ್ಕೆ ಸಾಕ್ಷಿಯಾಗಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಡಿಕೆ ಸುರೇಶ್ ತಂಗಿ ಎಂದು ಹಲವರಿಗೆ ನಾಮ ತೀಡಿದ ಆರೋಪ ಹೊತ್ತಿರುವ ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ಅನುಮಾನಾಸ್ಪದ ಸಂಬಂಧ ಇರಬಹುದಾದ ಹಿನ್ನೆಲೆಯಲ್ಲಿ ಅವರ ಕಾರ್ ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ವಿಷಯ ಬಯಲಾಗುವ ಸಾಧ್ಯತೆ ಇದ್ದು, ತನಿಖೆ ಬಿರುಸುಗೊಂಡಿದೆ.
ಈ ಹಿಂದೆ ಐಶ್ವರ್ಯ ಗೌಡಳ ಪತಿ ಹೆಸರಲ್ಲಿದ್ದ ಮೂರು ಐಷಾರಾಮಿ ಕಾರು ಸೀಜ್ ಮಾಡಿದ್ದ ಎಸಿಪಿ ಭರತ್ ಅವರ ತಂಡದಿಂದ ಇದೀಗ, ಆಕೆಗೆ ಸೇರಿದ ಮತ್ತೊಂದು ಕಾರನ್ನು ವಿನಯ್ ಕುಲಕರ್ಣಿ ಮನೆ ಬಳಿ ಸೀಜ್ ಮಾಡಲಾಗಿದೆ.
KA 03 NN8181 ನಂಬರಿನ ಅಂದಾಜು 60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರ್ ಇದಾಗಿದ್ದು, (C220D ಮರ್ಸಿಡಿಸ್ ಬೆಂಜ್) ವಂಚನೆ ಮಾಡಿದ್ದ ಹಣದಿಂದ ಕಾರು ಖರೀದಿಸಿ, ವಿನಯ್ ಕುಲಕರ್ಣಿಗೆ ಉಡುಗೊರೆ ರೂಪದಲ್ಲಿ ನೀಡಿರುವ ಅನುಮಾನದಡಿ ಕಾರ್ ಸೀಜ್ ಮಾಡಿಕೊಳ್ಳಲಾಗಿದೆ.
ವಶಕ್ಕೆ ಪಡೆದಿರುವ ವಾಹನವನ್ನು ಆರ್ ಆರ್ ನಗರ ಪೊಲೀಸ್ ಠಾಣೆ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ.
ದಿನಕ್ಕೊಂದು ಬಣ್ಣ, ಬದಲಾವಣೆ ತರುತ್ತಿರುವ ಕಾಗೆ ಬಂಗಾರಿ ಐಶ್ವರ್ಯಳ ಈ ವಂಚನೆ ಪ್ರಕರಣವು, ಇನ್ನೂ ಯಾರ್ಯಾರಿಗೆ ಉರುಳಾಗುತ್ತೋ ಕಾದು ನೋಡಬೇಕಿದೆ.