ಬೆಂಗಳೂರು: ಈಗ ವಿಜಯೇಂದ್ರ ನಿಜಬಣ್ಣ ಬಯಲಾಗಿದೆ ಎಂದು ಬಿಜೆಪಿ ಶಾಸಕ ಹಾಗೂ ರೆಬೆಲ್ಸ್ ತಂಡದ ನಾಯಕ ಬಸನಗೌಟ ಪಾಟೀಲ್ ಯತ್ನಾಳ್(Basanagout Patil Yatnal) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಾ. ಕೆ. ಸುಧಾಕರ್ (Dr K Sudhakar) ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ಬಳಿಕ ಬಿವೈ ವಿಜಯೇಂದ್ರ (Vijayendra) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಈಗ ವಿಜಯೇಂದ್ರ ಮುಖವಾಡ ಬಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಹೀಗಾಗಿಯೇ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಿಂದಿನಿಂದ ಆಟವಾಡುತ್ತಿದ್ದಾರೆ. ಸುಧಾಕರ ಅಷ್ಟೇ ಅಲ್ಲಾ ಪಕ್ಷದೊಳಗೆ ಸಾಕಷ್ಟು ಜನರಿಗೆ ಬೇಸರ ಇದೆ. ನಮ್ಮ ಗುಂಪು ದೊಡ್ಡದಾಗುತ್ತಿದೆ. ನಾಳೆಯ ಸಭೆಯಲ್ಲಿ ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆ ಬಗ್ಗೆ ಚರ್ಚೆ ಮಾಡುತ್ತೇವೆ. ಎರಡು ಹಂತದಲ್ಲಿ ಸಭೆ ನಡೆಸುತ್ತೇವೆ. ತಟಸ್ಥ ಬಣದೊಂದಿಗೆ ಚರ್ಚೆ ಮಾಡುತ್ತೇವೆ. ರಾಮುಲು ಬಳಿ ನಾನು ಮಾತನಾಡಿಲ್ಲ. ನಮ್ಮ ಪ್ರಮುಖರು ಮಾತನಾಡಿದ್ದಾರೆ ಎಂದಿದ್ದಾರೆ.
ವಿಜಯೇಂದ್ರಗೆ ದುಡ್ಡಿನ ದುರಹಂಕಾರ ಇದೆ. ಮುಡಾ ಹಗರಣ ವಿಚಾರದಲ್ಲಿ ಸಿಎಂ ರಾಜೀನಾಮೆ ಕೇಳಿ ಪಾದಯಾತ್ರೆ ಮಾಡ್ತಾನೆ, ಮೈಸೂರು ಮುಟ್ಟೋದರೊಳಗೆ ರಾಜೀನಾಮೆ ಕೊಡ್ಬೇಕು ಅಂತಾನೆ. ಸಿದ್ದರಾಮಯ್ಯ ಇವರದ್ದು ಎಲ್ಲವನ್ನು ಹೊರ ತೆಗೆದರೆ ಗೊತ್ತಾಗುತ್ತೆ. ಆದರೆ ಅವರು ಹೊರಗೆ ತೆಗೆಯುತ್ತಿಲ್ಲ ಎಂದು ಗುಡುಗಿದ್ದಾರೆ.