ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿಯ ಭಾರತೀಯ ಜನತಾ ಪಾರ್ಟಿಯ 18 ಶಾಸಕರನ್ನು ಮಾನ್ಯ ಸ್ಪೀಕರ್ ಅವರು ಅಮಾನತು ಗೊಳಿಸಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಆಡಳಿತ ಪಕ್ಷದ ಹಿರಿಯ ಸಚಿವರಾದ ಕೆ.ಎನ್.ರಾಜಣ್ಣನವರು ವಿಧಾನಸಭೆಯಲ್ಲೇ ಹನಿ ಟ್ರ್ಯಾಪ್ ಗೆ ಒಳಗಾಗಿದ್ದೇನೆ ಎಂದು ಸ್ವತಃ ಹೇಳಿಕೆ ನೀಡಿದ್ದಾರೆ.
ಈ ಹನಿ ಟ್ರ್ಯಾಪ್ ನಡೆಸುತ್ತಿರುವವರ ವಿರುದ್ಧ ನಾವು ಹೋರಾಟ ನಡೆಸಿದರೆ ನಮ್ಮನ್ನ ಹೊರದಬ್ಬುವ ಕೆಲಸ ಮಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಗಳೇ ದೇಶದ ಮುಂದೆ ನಮ್ಮ ರಾಜ್ಯದ ಶಾಸಕರ ಗೌರವ ಹರಾಜು ಹಾಕುವ ಕೆಲಸ ಮಾಡುತ್ತಿರುವುದು ನಿಮ್ಮ ಸ್ಥಾನಕ್ಕೆ ಶೋಭೆಯಲ್ಲ. ಅಧಿಕಾರದ ಮದ ಏರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ಸಚಿವರ ಪೈಪೋಟಿ ನಡೆಯುತ್ತಿರುವ ಪರಿಣಾಮ ಸಚಿವರು, ಶಾಸಕರನ್ನ ಬೀದಿಗೆ ತಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಸಚಿವರ ಮಾನ-ಹರಜಾಗುತ್ತಿದ್ದರೂ ಅವರ ರಕ್ಷಣೆಗೆ ಬಾರದ ಮುಖ್ಯಮಂತ್ರಿಗಳಿರುವುದು ನಾಡಿನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.