ಬೆಂಗಳೂರು: ಬಿಜೆಪಿಯಲ್ಲಿ ಬಣಗಳ ಮಧ್ಯೆದ ತಿಕ್ಕಾಟ ಜೋರಾಗಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ತೆರಳಿದ್ದರೆ, ಇನ್ನೊಂದೆಡೆ ಅವರ ಪರ ಬಣ ಚಾಮುಂಡೇಶ್ವರಿ ತಾಯಿಯ ಮೊರೆ ಹೋಗಿದೆ.
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವೈ ಸಂಪಂಗಿ ಸೇರಿದಂತೆ 30 ಕ್ಕೂ ಅಧಿಕ ಬಿಜೆಪಿ ನಾಯಕರು ದೇವಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ಯತ್ನಾಳ್ ಗೆ ಪಕ್ಷದ ಸಿದ್ಧಾಂತವಿದ್ದರೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಬೇಕು. ಕಾಂಗ್ರೆಸ್ ವಿರುದ್ಧ ಮಾತನಾಡಿದರೆ ಪ್ರಚಾರ ಸಿಗುವುದಿಲ್ಲ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನೇ ಟಾರ್ಗೆಟ್ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಬಹೀಗಾಗಿ ಬಿಜೆಪಿಗೆ ಈಗ ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳ ಕಾಟ ಶುರುವಾಗಿದೆ. ಇಂತಹ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇವೆ. ಯತ್ನಾಳ್ ಬೆನ್ನ ಹಿಂದೆ ಯಾರೂ ಇಲ್ಲ. ಕಾರ್ಯಕರ್ತರು, ಹಿಂಬಾಲಕರು ಹಿಂದೆ ಇದ್ದರೆ ಮಾತ್ರ ನಾಯಕರಾಗುತ್ತಾರೆ. ಯತ್ನಾಳ್ ಹಿಂದೆ ಯಾರೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.