ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಧರ್ಮಸ್ಥಳ ವಿಚಾರದಲ್ಲಿ ನಾವು ಮೊದಲು ಎಸ್‌ಐಟಿ ರಚಿಸಿದಾಗ ಬಿಜೆಪಿಯವರು ಸ್ವಾಗತ ಮಾಡಿದ್ದರು. ಆದರೆ ಮುಸುಕುಧಾರಿ ತೋರಿಸಿದ ಜಾಗದಲ್ಲಿ ಏನೂ ಸಿಗದೇ ಇದ್ದ ಕಾರಣಕ್ಕೆ ಇದೀಗ ತಿರುಗಿ ಬಿದ್ದಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಜಾಗದಲ್ಲಿ ಬಿಜೆಪಿಯವರೇನಾದರೂ ಇದ್ದರೆ ಅವರೂ ಎಸ್‌ಐಟಿ ರಚಿಸುತ್ತಿದ್ದರು. ಆದರೆ ಇದೀಗ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ. ನಾವು ಎಸ್‌ಐಟಿ ರಚನೆ ಮಾಡುವ ಮೂಲಕ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಸನ್ನಿಧಾನ ಹಾಗೂ ಧರ್ಮದರ್ಶಿಗಳ ಮೇಲೆ ಇದ್ದಂತಹ ಕಳಂಕವನ್ನು ತೆಗೆದುಹಾಕಿದ್ದೇವೆ. ಜನರ ನಂಬಿಕೆಯನ್ನು ಹೆಚ್ಚಿಸಿದ್ದೇವೆ. ಎಸ್‌ಐಟಿ ಅವರು ಈಗಲೂ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ದೆಹಲಿಗೆ ಹೋಗಿ ಯಾರೆಲ್ಲ ಇದ್ದಾರೆ ಎನ್ನುವ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.