ಕಲಬುರಗಿ: ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಗಾಣಗಾಪುರ ಧಾರ್ಮಿಕ ಕ್ಷೇತ್ರದಲ್ಲಿ ದತ್ತಾತ್ರೇಯನಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಈಗಾಗಲೇ ಪಕ್ಷದ ವತಿಯಿಂದ 25 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣಾ ಪ್ರಕ್ರಿಯೆಯು ಹೈಕಮಾಂಡ್ ಸೂಚನೆಯಂತೆ ಹಾಗೂ ವರಿಷ್ಠರು ಹೇಳಿದಂತೆ ನಡೆದಿದೆ. ಅಧ್ಯಕ್ಷರ ಆಯ್ಕೆಯಲ್ಲಿ ನಾನು ಮೂಗು ತೂರಿಸಿಲ್ಲ ಎಂದಿದ್ದಾರೆ.
ನಾನು ಶಿಕಾರಿಪುರದ ಶಾಸಕನಾಗಿರುವುದರಿಂದ ಶಿವಮೊಗ್ಗ ಜಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮಾತ್ರ ಅಭಿಪ್ರಾಯ ಮಂಡಿಸಿದ್ದೇನೆ. ಆದರೆ, ಬೇರೆ ಜಿಲ್ಲೆಗಳ ವಿಷಯದಲ್ಲಿ ನಾನು ಮಧ್ಯಸ್ಥಿಕೆ ವಹಿಸಿಲ್ಲ. ಚುನಾವಣಾ ಅಧಿಕಾರಿಗಳು ಆ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದಿದ್ದಾರೆ.