ಬೆಂಗಳೂರು: ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಹೇಳಿದ್ದಾರೆ.
ವಿಜಯವಾಡ ಮುನಿಸಿಪಾಲ್ ಕಾರ್ಪೊರೇಷನ್ ಉಪ ಮೇಯರ್ ನಿಯೋಗವು ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತ ಅಧ್ಯಯನಕ್ಕಾಗಿ ನಗರಕ್ಕೆ ಆಗಮಿಸಿದ್ದು, ಪಾಲಿಕೆ ಕೇಂದ್ರ ಕಚೇರಿಯ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ)ಗೆ ಭೇಟಿ ನೀಡಿ ಹಲವಾರು ವಿಷಯಗಳನ್ನು ತಿಳಿದುಕೊಂಡರು.
ಈ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಪೂರ್ಣ ಕಾರ್ಯವೈಖರಿಯ ಕುರಿತು ವಿಜಯವಾಡ ಪಾಲಿಕೆಯ ನಿಯೋಗಕ್ಕೆ ಆಯುಕ್ತರು ವಿವರಣೆ ನೀಡಿದರು. ಪಾಲಿಕೆಯಲ್ಲಿ ಮುಖ್ಯ ಆಯುಕ್ತರ ಅಡಿ ಕಾರ್ಯನಿರ್ವಹಿಸುವ ವಿಶೇಷ ಆಯುಕ್ತರು, ವಲಯ ಆಯುಕ್ತರು, ವಲಯಗಳು, ಅಧಿಕಾರಿ/ಸಿಬ್ಬಂದಿಗಳ ಕುರಿತು ಮಾಹಿತಿ ನೀಡಿದರು.
ನಗರದಲ್ಲಿ ನಾಗರಿಕರಿಂದ ಬರುವ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಸಲುವಾಗಿ ಐಸಿಸಿಸಿ ದೂರು ಕೇಂದ್ರ ನಿರ್ಮಾಣ ಮಾಡಲಾಗಿದ್ದು, ನಾಗರಿಕರು ದೂರುಗಳು ನೀಡುವ ಸಲುವಾಗಿ ಸಹಾಯ 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಅದರ ಜೊತೆಗೆ 1533 ಸಹಾಯವಾಣಿ ಸಂಖ್ಯೆ ಇದ್ದು, ಯಾವುದೇ ನಾಗರಿಕರು ದೂರು ನೀಡಿದ ಕೂಡಲೆ ಅದನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಕೆಲಸ ನಮ್ಮ ಅಧಿಕಾರಿ/ಸಿಬ್ಬಂದಿಗಳು ಮಾಡಲಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಪ್ರಮುಖವಾಗಿ ಕಸ ವಿಲೇವಾರಿ, ವಿದ್ಯುತ್ ದೀಪ, ರಸ್ತೆ ಗುಂಡಿಗಳು, ರಾಜಕಾಲುವೆ ಹಾಗೂ ಸೈಡ್ ಡ್ರೈನ್‌ಗಳ ಸ್ವಚ್ಛತೆ ಮಾಡುವುದು ಸವಾಲಿನ ವಿಷಯಗಳಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿ ಇರುವ ಸಮಸ್ಯೆಗಳನ್ನು ಬಗಹೆರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಘನ ತ್ಯಾಜ್ಯ ವಿಲೇವಾರಿಗಾಗಿ ಪ್ರತ್ಯೇಕವಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವನ್ನು ಸ್ಥಾಪಿಸಲಾಗಿದೆ. ಅದರ ಮೂಲಕ ತ್ಯಾಜ್ಯ ನಿರ್ವಹಣೆಯನ್ನು ನೋಡಿಕೊಳ್ಳಲಾಗುತ್ತಿದೆ. ಮಳೆಗಾಲದ ಪ್ರಾರಂಭಕ್ಕೂ ಮುಂಚಿತವಾಗಿಯೇ ರಾಜಕಾಲುವೆಗಳ ಸ್ವಚ್ಛತೆ, ಸೈಡ್ ಡ್ರೈನ್ ಗಳ ಸ್ವಚ್ಛತೆ ಮಾಡಲಾಗುತ್ತಿದು ಎಂದರು.
ಕುಡಿಯವ ನೀರು, ಒಳಚರಂಡಿ ವ್ಯವಸ್ಥೆಯನ್ನು ಜಲಮಂಡಳಿ ಇಲಾಖೆ ನೋಡಿಕೊಳ್ಳಲಿದೆ. ನಗರದಲ್ಲಿ ಬರುವ ಕೆರೆಗಳ ಪೈಕಿ ಆಯ್ದ ಕೆರೆಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹಸಿರೀಕರಣಕ್ಕೆ ಹೆಚ್ಚು ಆದ್ಯತೆ
ಪಾಲಿಕೆಯ ಅರಣ್ಯ ವಿಭಾಗದ ವತಿಯಿಂದ ಪ್ರತಿ ವರ್ಷ ಸಸಿಗಳನ್ನು ನೆಡುವ ಗುರಿಯಿಟ್ಟುಕೊಂಡು ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡುತ್ತೇವೆ. ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದು, ಮಳೆಗಾಲ ಪ್ರಾರಂಭವಾಗುವ ವೇಳೆಗೆ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕೆ-100 ಯೋಜನೆ ವೀಕ್ಷಣೆ
ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ಕೆ-100 (ನಾಗರಿಕ ಜಲಮಾರ್ಗ) ಯೋಜನೆಯ ಸ್ಥಳಕ್ಕೆ ವಿಜಯವಾಡ ಮುನಿಸಿಪಲ್ ಕಾರ್ಪೋರೇಷನ್ ನಿಯೋಗವು ಭೇಟಿ ನೀಡಿ ವೀಕ್ಷಿಸಿರು. ಕೋರಮಂಗಲ ರಾಜಕಾಲುವೆ (ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ನಿರ್ಮಾಣ ಮಾಡುತ್ತಿದ್ದು, ವಾಯು ವಿಹಾರಿಗಳ ವೀಕ್ಷಣಾ ತಾಣವನ್ನಾಗಿ ಮಾರ್ಪಾಡು ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟೆಂಡರ್ ಶ್ಯೂರ್ ರಸ್ತೆ ವೀಕ್ಷಣೆ
ನಗರದಲ್ಲಿರುವ ರಸ್ತೆಗಳು ಹೆಚ್ಚು ಬಾಳಿಕೆ ಬರಬೇಕೆಂಬ ಉದ್ದೇಶದಿಂದ ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ನೃಪತುಂಗ ರಸ್ತೆಗೆ ಭೇಟಿ ನೀಡಿ ಟೆಂಡರ್ ಶ್ಯೂರ್ ರಸ್ತೆ ಹಾಗೂ ವೈಟ್ ಟಾಪಿಂಗ್ ಕ್ಯಾರೇಜ್ ವೇ (ಪಾದಚಾರಿ ಮಾರ್ಗ) ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ವಿಜಯವಾಡ ಮುನಿಸಿಪಲ್ ಕಾರ್ಪೋರೇಷನ್‌ನ ಉಪ ಮಹಾಪೌರರಾದ ಅವತು ಶೈಲಜ ರೆಡ್ಡಿ, ವೈಸಿಪಿ ಫ್ಲೋರ್ ಲೀಡರ್ ಆದ ವೆಂಕಟಸತ್ಯಾನಾರಾಯಣ, ಟಿಡಿಪಿ ಫ್ಲೋರ್ ಲೀಡರ್ ಆದ ಉಮಿದಿ ವೆಂಕಟೇಶ್ವರ ರಾವ್, ಬಿಜೆಪಿ ಫ್ಲೋರ್ ಲೀಡರ್ ಆದ ಬುಲ್ಲ ವಿಜಯ್ ಕುಮಾರ್, ಕಾರ್ಪೊರೇಟರ್ ಗಳು, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.



















