ವಿಜಯಪುರ : ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ ಮಾಡಿರುವಂತಹ ಘಟನೆ ನಗರದ ಅಮನ್ ಕಾಲೋನಿಯ ಮನೆಯೊಂದರಲ್ಲಿ ನಡೆದಿದೆ. ಸಮೀರ್ ಅಲಿಯಾಸ್ ಪಿಕೆ ಇನಾಂದಾರ್(26) ಹತ್ಯೆಗೊಳಗಾದ ಪ್ರಿಯಕರ.
ಸಹೋದರ ಅಸ್ಲಮ್ ಭಾಗವಾನ್ ಸಹಾಯ ಪಡೆದು ತಯ್ಯಾಬಾ ಭಾಗವಾನ್ ಎಂಬ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಹಿಳೆ ಮತ್ತು ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಕೊಲೆಯಾಗಿರುವ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ರೌಡಿ ಶೀಟರ್ ಆಗಿದ್ದ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದನಂತೆ. ಕಳೆದ ನಾಲ್ಕರು ವರ್ಷಗಳಿಂದ ಸಮೀರ್, ತಯ್ಯಾಬಾ ಜೊತೆಗೆ ಸಂಬಂಧ ಹೊಂದಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಸಮೀರ್ ಮನಸ್ತಾಪ ಮಾಡಿಕೊಂಡಿದ್ದನಂತೆ. ಈ ವಿಚಾರವಾಗಿ ಆತನ ಮೇಲೆ ಹಲ್ಲೆಯೂ ಆಗಿತ್ತಂತೆ. ಕೆಲ ಕಾಲ ದೂರವಿದ್ದ ಇಬ್ಬರು ನಂತರ ಮತ್ತೆ ಒಂದಾಗಿದ್ದರು. ಬಳಿಕ ಸಮೀರ್ ತಯ್ಯಾಬಾಗೆ ಕಿರುಕುಳ ನೀಡುತ್ತಿದ್ದನಂತೆ. ಆತನ ಕಿರುಕುಳದಿಂದ ಬೇಸತ್ತು ಸಮೀರ್ನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ.
ಆಕೆಗೆ ಸಹೋದರ ಅಸ್ಲಮ್ ಸಹಾಯ ಮಾಡಿದ್ದಾನೆ. ನಿನ್ನೆ ರಾತ್ರಿ 8-30ರ ಸುಮಾರಿಗೆ ಸಮೀರ್ ತಯ್ಯಾಬಾ ಬಳಿ ಬಂದಿದ್ದ. ರಾತ್ರಿ 11 ರಿಂದ 12 ಗಂಟೆ ವೇಳೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಇದನ್ನೂ ಓದಿ : ಹಾಲಿನ ದರ ಏರಿಕೆ ಮಾಡಲ್ಲ, ಈ ಬಗ್ಗೆ ಯಾವುದೇ ಪ್ರಸ್ತಾಪ ಬೇಡ | ಸಚಿವ ಕೆ ವೆಂಕಟೇಶ್ ಹೇಳಿಕೆ



















