ವಿಜಯಪುರ : ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆ ಹೊರಭಾಗದಲ್ಲಿ ಮಗಳಿಗಾಗಿ ತಂದೆ-ತಾಯಿ ತಡರಾತ್ರಿವರೆಗೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ನಿಶಾ ಚೌಹಾಣ್ ಎಂಬ ಯುವತಿ, ಮೊಹಮ್ಮದ್ ಸಲಿಂ ಸುತಾರ್ ಎಂಬ ಯುವಕನೊಂದಿಗೆ ಪ್ರೀತಿಸಿ ಪರಾರಿಯಾಗಿ ಮದುವೆಯಾಗಿ ಮರಳಿದ್ದಾಳೆ.
ನಿಶಾ ಹಾಗೂ ಆಕೆಯನ್ನು ಮದುವೆಯಾದ ಯುವಕ ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಈ ವೇಳೆ ತಂದೆ-ತಾಯಿ ಮಗಳನ್ನು ಮನೆಗೆ ಬರಲು ಮನವಿ ಮಾಡಿಕೊಂಡರು. ಆದರೆ ನಾನು ನನ್ನ ಗಂಡನ ಜೊತೆಯೇ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಯುವತಿ ಸ್ಪಷ್ಟವಾಗಿ ಹೇಳಿದ್ದಾಳೆ.
ಪೋಷಕರು ಎಷ್ಟೇ ಕರೆದರೂ ಮಗಳು ಒಪ್ಪದ ಹಿನ್ನೆಲೆಯಲ್ಲಿ, ಕೊನೆಗೆ ಪೊಲೀಸ್ ಠಾಣೆ ಹೊರಭಾಗದಲ್ಲಿ ಮಗಳಿಗಾಗಿ ತಂದೆ-ತಾಯಿ ಕಾದು ಕುಳಿತಿದ್ದಾರೆ. ಪೊಲೀಸ್ ವಾಹನದಲ್ಲಿ ಮಗಳು ತೆರಳುತ್ತಿದ್ದ ವೇಳೆ, ಆಕೆಯನ್ನು ನೋಡಲು ನಡುರಸ್ತೆಯಲ್ಲೇ ತಾಯಿ ವಾಹನಕ್ಕೆ ಅಡ್ಡಬಿದ್ದ ಘಟನೆ ಮನಕಲಕುವಂತಿತ್ತು. ಆದರೆ ಮಗಳು ತಾಯಿಯ ಮುಖವನ್ನೂ ನೋಡದೇ ತೆರಳಿದ್ದಾಳೆ ಎನ್ನಲಾಗಿದೆ.
ಮಗಳಿಗಾಗಿ ಪೊಲೀಸ್ ಠಾಣೆ ಹೊರಭಾಗದಲ್ಲಿ ಪೋಷಕರು ರಾತ್ರಿಯಿಡೀ ಕಾದು ಕುಳಿತಿದ್ದಾರೆ. ಗಮನಾರ್ಹವಾಗಿ, ಕಳೆದ ವಾರ ಫೆಬ್ರವರಿ 4, 2026ರಂದು ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದಾದ ಬಳಿಕ ಠಾಣೆಗೆ ಹಾಜರಾದ ಯುವತಿ, ನಾನು ಎಲ್ಲಿಗೂ ಹೋಗಿಲ್ಲ, ನನ್ನ ಇಚ್ಛೆಯಂತೆ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ : ಗ್ಯಾಸ್ ಲೀಕ್‌ನಿಂದ ಧಗಧಗಿಸಿದ ಮನೆ | ಇಬ್ಬರಿಗೆ ಗಾಯ



















