ವಿಜಯನಗರ : ಪತ್ನಿಯ ಶೀಲ ಶಂಕಿಸುತ್ತಿದ್ದ ಪತಿ, ಆಕೆಯನ್ನು ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್ ಗುಂಡ್ಲಕೇರಿ ಟಿ.ಬಿ.ಬೋರ್ಡ್ ಕ್ವಾಟ್ರಸ್ನಲ್ಲಿ ಗುರುವಾರ ನಡೆದಿದೆ.
ಹೊಸಪೇಟೆ ಟಿ.ಬಿ.ಡ್ಯಾಂನ ವೆಂಕಯ್ಯ ಕ್ಯಾಂಪ್ ನಿವಾಸಿ ಝಾನ್ಸಿ (36) ಮೃತರು. ಇವರ ಪತಿ, ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸೆಲ್ವಕುಮಾರ್ (40) ಕೊಲೆ ಆರೋಪಿಯಾಗಿದ್ದು, ಬಂಧಿಸಲಾಗಿದೆ ಎಂದು ಎಸ್‌ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಝಾನ್ಸಿ ಮತ್ತು ಸೆಲ್ವಕುಮಾರ್ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಏಳು ವರ್ಷ ಚೆನ್ನಾಗಿಯೇ ಇದ್ದರು. ಬಳಿಕ ಝಾನ್ಸಿ ಶೀಲದ ಬಗ್ಗೆ ಪತಿ ಅನುಮಾನಿಸಿ ಜಗಳ ಮಾಡತೊಡಗಿದ್ದ. ಮೂರು ತಿಂಗಳ ಹಿಂದೆ ಹೀಗೆ ಜಗಳವಾದಾಗ ಮನನೊಂದ ಆಕೆ ವೆಂಕಟಾಪುರದ ತನ್ನ ಚಿಕ್ಕಮ್ಮನ ಮನೆಗೆ ಬಂದು ಅಲ್ಲೇ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳವಾರ ರಾತ್ರಿ ಅಲ್ಲಿಗೆ ಬಂದಿದ್ದ ಸೆಲ್ವಕುಮಾರ, ಪತ್ನಿಯೊಂದಿಗೆ ಜಗಳ ಮಾಡಿದ್ದ. ಬುಧವಾರ ಮತ್ತೆ ಬಂದು ಮನೆಗೆ ಬರುವಂತೆ ಹೇಳಿದಾಗ, ಹಿರಿಯರು ಹೇಳಿದರೆ ಎರಡು ದಿನಗಳಲ್ಲಿ ಬರುವುದಾಗಿ ಝಾನ್ಸಿ ಉತ್ತರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಸೆಲ್ವಕುಮಾರ, ಪಕ್ಕದಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಪತ್ನಿಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಝಾನ್ಸಿಯ ಚಿಕ್ಕಮ್ಮ ಮತ್ತು ಅವರ ಮಗಳು ಹತ್ತಿರ ಬಂದಾಗ ಅವರನ್ನೂ ಕೊಲ್ಲುವ ಬೆದರಿಕೆ ಒಡ್ಡಿದ್ದ. ಹೀಗಾಗಿ ಅವರು ತಪ್ಪಿಸಿಕೊಂಡು ಹೋದರು. 3-4 ಬಾರಿ ಮಚ್ಚಿನೇಟು ಬಿದ್ದ ಕಾರಣ ಝಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಎಸ್‌ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಟಿ.ಮಂಜುನಾಥ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆದಾಯ ತೆರಿಗೆ ಇಲಾಖೆಯಲ್ಲಿ ಯುವ ವೃತ್ತಿಪರರ ನೇಮಕಾತಿ | ಬೆಂಗಳೂರಿನಲ್ಲೇ ಕೆಲಸ



















