ಮುಂಬೈ : ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಇದೀಗ ಸಾಂಪ್ರದಾಯಿಕ ಹನಿಮೂನ್ ಶೈಲಿಯನ್ನು ಬದಿಗೊತ್ತಿ, ತಮ್ಮ ಆಪ್ತ ಸ್ನೇಹಿತರ ಬಳಗದೊಂದಿಗೆ ಥೈಲ್ಯಾಂಡ್‌ನ ‘ಕೋ ಸಮುಯಿ’ ದ್ವೀಪದಲ್ಲಿ ‘ಬಡ್ಡಿಮೂನ್’ (Buddymoon) ಆಚರಿಸುತ್ತಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ನವಜೋಡಿ ತಂಗಿರುವ ‘ವಿಲ್ಲಾ ಕೋ ಕೂನ್’ ಎಂಬ ಸುಸಜ್ಜಿತ ವಿಲ್ಲಾವು ತನ್ನ ಐಷಾರಾಮಿ ಸೌಲಭ್ಯಗಳಿಂದಾಗಿ ಎಲ್ಲರ ಗಮನ ಸೆಳೆದಿದೆ. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವ ಈ ವಿಲ್ಲಾದಲ್ಲಿ ಒಂದು ರಾತ್ರಿ ತಂಗಲು ಬರೋಬ್ಬರಿ 2.35 ಲಕ್ಷ ರೂಪಾಯಿ ಬಾಡಿಗೆ ತೆರಬೇಕಿದೆ.
ಮೆಡಿಟರೇನಿಯನ್ ಮತ್ತು ಏಷ್ಯನ್ ವಾಸ್ತುಶಿಲ್ಪದ ಸಮ್ಮಿಶ್ರಣ ಹೊಂದಿರುವ ಈ ವಿಲ್ಲಾ ಚಾವೆಂಗ್ ಕೊಲ್ಲಿಯ ಸುಂದರ ನೋಟವನ್ನು ಒದಗಿಸುತ್ತದೆ. ಏಳು ಬೆಡ್‌ರೂಮ್‌ಗಳನ್ನು ಹೊಂದಿರುವ ಈ ಬೃಹತ್ ಮನೆಯಲ್ಲಿ 14 ಮಂದಿ ವಯಸ್ಕರು ಮತ್ತು 8 ಮಕ್ಕಳು ಏಕಕಾಲಕ್ಕೆ ತಂಗಬಹುದಾಗಿದ್ದು, ಸ್ನೇಹಿತರೊಂದಿಗೆ ಸಮಯ ಕಳೆಯಲು ಇದು ಹೇಳಿ ಮಾಡಿಸಿದ ಜಾಗವಾಗಿದೆ.
ವಿಲ್ಲಾದಲ್ಲಿನ ಹೈಟೆಕ್ ಸೌಲಭ್ಯಗಳು
ಈ ಐಷಾರಾಮಿ ವಿಲ್ಲಾವು ಕೇವಲ ವಾಸಕ್ಕೆ ಮಾತ್ರವಲ್ಲದೆ ಮನರಂಜನೆಗೂ ಹೆಸರಾಗಿದೆ. ಇಲ್ಲಿ ಬೃಹತ್ ಗಾತ್ರದ ಲಿವಿಂಗ್ ಏರಿಯಾ, ಸ್ವಿಮ್ಮಿಂಗ್ ಪೂಲ್, ಪೂಲ್ ಟೇಬಲ್ ಮತ್ತು ಫೂಸ್‌ಬಾಲ್‌ನಂತಹ ಕ್ರೀಡಾ ಸೌಲಭ್ಯಗಳಿವೆ. ಅಡುಗೆ ಮನೆ ಕೂಡ ಅತ್ಯಾಧುನಿಕವಾಗಿದ್ದು, ಪ್ರೀಮಿಯಂ ಉಪಕರಣಗಳನ್ನು ಹೊಂದಿದೆ. ವಿಶೇಷವೆಂದರೆ ಇಲ್ಲಿ ಅತಿಥಿಗಳಿಗಾಗಿ ಪಿಜ್ಜಾ ಓವನ್‌ಗಳಿದ್ದು, ತಾಜಾ ಪಿಜ್ಜಾಗಳ ಸವಿಯನ್ನು ಸವಿಯಬಹುದಾಗಿದೆ. ಸಮುದ್ರದ ಅಲೆಗಳನ್ನು ನೋಡುತ್ತಾ ಈಜಬಲ್ಲ ಇನ್ಫಿನಿಟಿ ಪೂಲ್ ಇಲ್ಲಿನ ಪ್ರಮುಖ ಆಕರ್ಷಣೆ.
‘ಪತಿ’ ಎಂದು ಕರೆಯಲು ರಶ್ಮಿಕಾ ಸಂಕೋಚ
ತಮ್ಮ ಈ ಸುಂದರ ಕ್ಷಣಗಳ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿಜಯ್ ದೇವರಕೊಂಡ ಅವರನ್ನು ‘ನನ್ನ ಪತಿ’ ಎಂದು ಕರೆಯಲು ನನಗೆ ಇನ್ನೂ ಅಭ್ಯಾಸವಾಗಿಲ್ಲ ಎಂದು ರಶ್ಮಿಕಾ ನಾಚಿಕೆಯಿಂದ ಹೇಳಿಕೊಂಡರೆ, ವಿಜಯ್ ಅವರು ರಶ್ಮಿಕಾ ಅವರನ್ನು ‘ನನ್ನ ಅತ್ಯುತ್ತಮ ಗೆಳತಿ’ ಎಂದು ಸಂಭೋದಿಸಿದ್ದಾರೆ. ಬೆಳಗಿನ ಉಪಾಹಾರದಿಂದ ಹಿಡಿದು ಸ್ನೇಹಿತರೊಂದಿಗೆ ಡಾನ್ಸ್ ಮಾಡುವವರೆಗೆ ಎಲ್ಲೂ ಕೂಡ ಈ ಜೋಡಿ ಸಂಭ್ರಮಕ್ಕೆ ಕೊರತೆ ಮಾಡಿಲ್ಲ. ಈ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಮನ ಗೆದ್ದಿವೆ.
ಇದನ್ನೂ ಓದಿ : ಭಾರತಕ್ಕೆ ಇರಾನ್ ಅಭಯ.. ಹೊರ್ಮುಜ್ ಸಂಚಾರ ಮುಕ್ತಗೊಂಡ ‘5 ಮಿತ್ರರಾಷ್ಟ್ರ’ಗಳ ಪಟ್ಟಿಯಲ್ಲಿ ಸ್ಥಾನ!



















