ಹೈದರಾಬಾದ್: ಅಕ್ರಮ ಬೆಟ್ಟಿಂಗ್ ಆ್ಯಪ್(Betting App)ಗಳ ವಿರುದ್ಧ ಸಮರ ಸಾರಿರುವ ತೆಲಂಗಾಣ ಕಾಂಗ್ರೆಸ್ ಸರ್ಕಾರವು, ಇಂಥ ಆ್ಯಪ್ಗಳ ಪರವಾಗಿ ಪ್ರಚಾರ ನಡೆಸುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಆರಂಭಿಸಿದೆ. ಅದರಂತೆ, ಅಕ್ರಮ ಬೆಟ್ಟಿಂಗ್ ಆ್ಯಪ್ಗಳಿಗೆ ಪ್ರಚಾರ ನೀಡಿರುವ ಟಾಲಿವುಡ್ ಖ್ಯಾತ ನಟರಾದ ರಾಣಾ ದಗ್ಗುಬಾಟಿ(Rana Daggubati), ಪ್ರಕಾಶ್ ರೈ(Prakash Raj), ವಿಜಯ ದೇವರಕೊಂಡ(Vijay Deverakonda), ಮಂಚು ಲಕ್ಷ್ಮಿ ಸೇರಿದಂತೆ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಎಂಬವರು ಹೈದರಾಬಾದ್ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಟಿಯರಾದ ಪ್ರಣೀತಾ, ನಿಧಿ ಅಗರ್ವಾಲ್, ಸೋಷಿಯಲ್ ಮೀಡಿಯಾ ಇನ್ ಫ್ಲ್ಯೂಯೆನ್ಸರ್ ಗಳಾದ ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣುಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಎಂಬವರ ಹೆಸರುಗಳೂ ದೂರಿನಲ್ಲಿವೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 112, ಮತ್ತು 49ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆಯ ಸೆಕ್ಷನ್ 4, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66-ಡಿ ಅನ್ವಯವೂ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ರಾಣಾ ದಗ್ಗುಬಾಟಿ ಹಾಗೂ ಪ್ರಕಾಶ್ ರಾಜ್ ಅವರು ಜಂಗ್ಲೀ ರಮ್ಮಿ ಪರ ಪ್ರಚಾರ ನಡೆಸಿದ್ದರೆ, ವಿಜಯ್ ದೇವರಕೊಂಡ ಅವರು ಎ23 ಪರ, ಮಂಚು ಲಕ್ಷ್ಮೀ ಅವರು ಯೋಲೋ 247 ಪರ, ಪ್ರಣೀತಾ ಅವರು ಫೇರ್ ಪ್ಲೇ ಪರ ಹಾಗೂ ನಿಧಿ ಅಗರ್ವಾಲ್ ಅವರು ಜೀತ್ ವಿನ್ ಪರ ಪ್ರಚಾರ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಖ್ಯಾತ ಸೆಲೆಬ್ರಿಟಿಗಳೇ ಬೆಟ್ಟಿಂಗ್ ಆಪ್ ಗಳ ಪರ ಪ್ರಚಾರ ನಡೆಸುವುದು ಯುವಜನರ ನೈತಿಕ ಭ್ರಷ್ಟತೆಗೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಅನೇಕರು ಸಾಲದ ಸುಳಿಗೆ ಸಿಲುಕಿ ಜೀವವನ್ನೇ ಕಳೆದುಕೊಳ್ಳುವಂಥ ಸ್ಥಿತಿಗೆ ತಳ್ಳುತ್ತದೆ ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.