ಉಡುಪಿ : ಭರತನಾಟ್ಯ ವಿದುಷಿ ದೀಕ್ಷಾ ವಿ. ಅವರು ಇಂದು (ಶನಿವಾರ) ಅಪರಾಹ್ನ 3:30ಕ್ಕೆ ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಪೂರ್ಣಗೊಳಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಹೊಸ ವಿಶ್ವದಾಖಲೆಯೊಂದಿಗೆ ಸತತ 9 ದಿನಗಳ ತನ್ನ ನೃತ್ಯ ಪ್ರದರ್ಶನವನ್ನು ಮುಕ್ತಾಯಗೊಳಿಸಿದ್ದಾರೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ಉಡುಪಿ ಅಜ್ರಕಾಡಿನ ಡಾ.ಜಿ.ಶಂಕರ್ ಮಹಿಳಾ ಸ್ನಾತಕೋತ್ತರ ಕಾಲೇಜು ಸಭಾಂಗಣದಲ್ಲಿ ಕಳೆದ ಆ.21ರಿಂದ ಭರತನಾಟ್ಯ ಪ್ರದರ್ಶನದಲ್ಲಿ ತೊಡಗಿದ್ದರು.
ಗುರುವಾರ ಸಂಜೆ 5:30ರ ಸುಮಾರಿಗೆ 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ಮಾಡಿ ಕಳೆದು ತಿಂಗಳು ಮಂಗಳೂರಿನ ರೆಮೋನಾ ಅವರು ಸೃಷ್ಟಿಸಿದ್ದ ವಿಶ್ವ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಾಣ ಮಾಡಿದ್ದರು. ಇಂದು(ಶನಿವಾರ) ಅಪರಾಹ್ನ ವಿದುಷಿ ದೀಕ್ಷಾ ಅವರು ತನ್ನ ಪ್ರದರ್ಶನವನ್ನು ಮುಕ್ತಾಯಗೊಳಿಸುವಾಗ ನಿರಂತರವಾಗಿ 216 ಗಂಟೆಗಳ ಹೊಸ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ದೀಕ್ಷಾ ಅವರ 9 ದಿನಗಳ ಹೊಸ ಸಾಧನೆಯನ್ನು “ನವರಸ ದೀಕ್ಷಾ ವೈಭವಂ” ಕಾರ್ಯಕ್ರಮದ ಮೂಲಕ ಸಂಪನ್ನಗೊಂಡಿದೆ. ಶನಿವಾರ ಅಪರಾಹ್ನ 3:30ಕ್ಕೆ 216 ಗಂಟೆಗಳ ಸಾಧನೆಯ ಗುರಿ ತಲುಪಿದ್ದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ನಮೂದಿಸುವ ಮೂಲಕ ಉಡುಪಿ ಜಿಲ್ಲೆ ಹಾಗೂ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಶ್ಯಾ ಹೆಡ್ ಮನೀಶ್ ಬಿಟ್ಟೋಯ್ ಉಪಸ್ಥಿತರಿದ್ದು, ದೀಕ್ಷಾರ ವಿಶ್ವ ದಾಖಲೆಯನ್ನು ಘೋಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.