ನವದೆಹಲಿ‘: ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 336 ರನ್‌ಗಳ ಬೃಹತ್ ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ 1-1 ಸಮಬಲ ಸಾಧಿಸಿದೆ. ಭಾರತದ ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ನಾಯಕ ಶುಭಮನ್ ಗಿಲ್ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋತಿದ್ದ ಭಾರತ ತಂಡ, ಎಜ್‌ಬಾಸ್ಟನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 608 ರನ್‌ಗಳ ಅವಶ್ಯಕತೆ ಇತ್ತು, ಆದರೆ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಇಂಗ್ಲೆಂಡ್ 271 ರನ್‌ಗಳಿಗೆ ಆಲ್ ಔಟ್ ಆಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡದ ಮೊದಲ ಗೆಲುವು ಇದಾಗಿದ್ದು, ಇದು ಐತಿಹಾಸಿಕ ಸಾಧನೆ ಎಂದು ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಯಕ ಶುಭಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಬೌಲಿಂಗ್‌ನಲ್ಲಿ, ಪ್ರಥಮ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಸಾಧನೆ ಮಾಡಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಕಾಶ್ ದೀಪ್ 6 ವಿಕೆಟ್ ಪಡೆದು ತಂಡದ ಗೆಲುವಿಗೆ ಬಲ ತುಂಬಿದರು. ಆಕಾಶ್ ದೀಪ್ ತಮ್ಮ ಚೊಚ್ಚಲ 10 ವಿಕೆಟ್ ಸಾಧನೆಯ ಮೂಲಕ ಗಮನ ಸೆಳೆದರು.
ಶುಭಮನ್ ಗಿಲ್ ನಾಯಕತ್ವಕ್ಕೆ ಆಕಾಶ್ ಚೋಪ್ರಾ ಪ್ರಶಂಸೆ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಆಕಾಶ್ ಚೋಪ್ರಾ, ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರನ್ನು ಗುಣಗಾನ ಮಾಡಿದ್ದಾರೆ. “ಈ ಪಂದ್ಯದ ಗೆಲುವು ದಾಖಲೆ ಬರೆಯುವ ಹಾಗೂ ದಾಖಲೆ ಮುರಿಯುವ ಪಂದ್ಯವಾಗಿತ್ತು.
ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ, ಇದೇ ಮೊದಲ ಬಾರಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿ ಇತಿಹಾಸ ಸೃಷ್ಟಿಸಿತ್ತು. ಅಲ್ಲದೆ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರು ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ,” ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂಗ್ಲೆಂಡ್‌ನ ‘ಬ್ಯಾಝ್‌ಬಾಲ್’ ತಂತ್ರಕ್ಕೆ ಹಿನ್ನಡೆ
ಎಜ್‌ಬಾಸ್ಟನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಜನಪ್ರಿಯ ‘ಬ್ಯಾಝ್‌ಬಾಲ್’ ತಂತ್ರವು ಟೀಮ್ ಇಂಡಿಯಾದ ಸರ್ವತೋಮುಖ ಪ್ರದರ್ಶನದ ಎದುರು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. “ಈ ಪಂದ್ಯಕ್ಕೂ ಮುನ್ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ತಂಡ ಟೆಸ್ಟ್ ಇತಿಹಾಸದಲ್ಲಿ ಗೆಲುವು ಸಾಧಿಸಿರಲಿಲ್ಲ.
ವಿದೇಶಿ ನೆಲಗಳಲ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಅವಲೋಕಿಸಿದರೆ, ಅವೆಲ್ಲ ಐತಿಹಾಸಿಕ ಗೆಲುವಾಗಿದೆ. ಈ ಹಿಂದೆ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದೆವು, ಅದೇ ರೀತಿ ಪರ್ತ್ ಮತ್ತು ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಕಂಡಿದ್ದೇವೆ. ನಾವು (ಟೀಮ್ ಇಂಡಿಯಾ) ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸದ ಕ್ರೀಡಾಂಗಣದಲ್ಲಿ ಗೆಲುವಿನ ಸಂಭ್ರಮ ಆಚರಿಸಿದ್ದೇವೆ. ಇಂಗ್ಲೆಂಡ್‌ನ ಬ್ಯಾಝ್‌ಬಾಲ್ ಸೂತ್ರವನ್ನು ಸಂಪೂರ್ಣವಾಗಿ ವಿಫಲಗೊಳಿಸಿ ಎದುರಾಳಿ ತಂಡದ ಎದುರು ಗೆಲುವು ಸಾಧಿಸಲು ನಾವು ಅರ್ಹರು ಎಂಬುದನ್ನು ತೋರಿಸುವ ಮೂಲಕ ಸಂಭ್ರಮಿಸಿದ್ದೇವೆ,” ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿದೆ. ಜುಲೈ 10 ರಂದು ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡೂ ತಂಡಗಳು ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿವೆ.