ಭೋಪಾಲ್: ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ ಅಭಿನಯದ, ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನಾಧಾರಿತ ‘ಛಾವಾ’ ಚಿತ್ರಕ್ಕೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಕಾರ್ಯಕ್ರಮವೊಂದರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಘೋಷಣೆ ಮಾಡಿದ್ದಾರೆ. ಫೆಬ್ರವರಿ 14ರಂದು ಬಿಡುಗಡೆಯಾದ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
“ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಅವರ ಮಗ ಸಂಭಾಜಿ ಮಹಾರಾಜ್ ಅವರ ಜೀವನಾಧಾರಿತ ಹಿಂದಿ ಚಿತ್ರ ‘ಛಾವಾ’ವನ್ನು ತೆರಿಗೆ ಮುಕ್ತವಾಗಿ ಬಿಡುಗಡೆ ಮಾಡುವುದಾಗಿ ನಾನು ಘೋಷಿಸುತ್ತೇನೆ” ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಚಿತ್ರದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರವನ್ನು ಭಾರತದಾದ್ಯಂತ ತೆರಿಗೆ ಮುಕ್ತಗೊಳಿಸಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ್ದರು. “ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿ ಉತ್ತಮ ಚಿತ್ರವನ್ನು ನಿರ್ಮಿಸಿರುವುದು ಬಹಳ ಸಂತೋಷದ ವಿಚಾರ. ನಾನು ಸಿನಿಮಾವನ್ನೂ ಇನ್ನೂ ವೀಕ್ಷಿಸಿಲ್ಲ, ಆದರೆ, ಇತಿಹಾಸವನ್ನು ತಿರುಚದೆ ಈ ಸಿನಿಮಾ ನಿರ್ಮಿಸಲಾಗಿದೆ ಎಂದು ಜನರೇ ಹೇಳಿರುವುದನ್ನು ಕೇಳಿದ್ದೇನೆ.

ಮಹಾರಾಷ್ಟ್ರದಲ್ಲಿ 2017ರಿಂದಲೇ ಚಲನಚಿತ್ರಗಳ ಮೇಲಿನ ಮನರಂಜನಾ ತೆರಿಗೆಯನ್ನು ತೆಗೆದುಹಾಕಲಾಗಿದೆ. ಈ ಚಿತ್ರವನ್ನು ಪ್ರಚಾರ ಮಾಡಲು ಮತ್ತು ಸಾಧ್ಯವಾದಷ್ಟು ಜನರಿಗೆ ತಲುಪುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಫಡ್ನವೀಸ್ ಹೇಳಿದ್ದರು.
ಪಶ್ಚಿಮ ಭಾರತ ಸಿನಿಮಾ ಉದ್ಯೋಗಿಗಳ ಒಕ್ಕೂಟ(FWICE)ವು ಛಾವಾ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು.
“ಹಿಂದಿ ಚಲನಚಿತ್ರ ಛಾವಾ ಪ್ರಸಿದ್ಧ ಮರಾಠಾ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಅವರ ತ್ಯಾಗ, ಶೌರ್ಯ, ನಿಸ್ವಾರ್ಥತೆ ಮತ್ತು ಕರ್ತವ್ಯ ಪ್ರಜ್ಞೆಯ ಕಥೆಯನ್ನು ಹೇಳುತ್ತದೆ. ಈ ಚಲನಚಿತ್ರವನ್ನು ಎಲ್ಲಾ ವಯೋಮಾನದವರು ಶ್ಲಾಘಿಸುತ್ತಿದ್ದಾರೆ ಮತ್ತು ಈ ಕಥೆಯಿಂದ ಯುವಕರು ಹೆಚ್ಚು ಪ್ರಭಾವಿತರಾಗಿದ್ದಾರೆ” ಎಂದು ಒಕ್ಕೂಟವು ತಿಳಿಸಿತ್ತು.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಡಯಾನಾ ಪೆಂಟಿ, ದಿವ್ಯಾ ದತ್ತಾ, ವಿನೀತ್ ಕುಮಾರ್ ಸಿಂಗ್ ಮತ್ತು ಅಶುತೋಷ್ ರಾಣಾ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ಶಿವಾಜಿ ಸಾವಂತ್ ಅವರ ಛಾವಾ ಎಂಬ ಹೆಸರಿನ ಮರಾಠಿ ಕಾದಂಬರಿಯನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ.