ನವದೆಹಲಿ: ಒಡಿಯಾ ಭಾಷೆಯ ಖ್ಯಾತ ಸಿನಿಮಾ ನಟ ಉತ್ತಮ್ ಮೊಹಂತಿ (Uttam Mohanty) (66) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಪಿತ್ತಜನಕಾಂಗ ಕಾಯಿಲೆಯಿಂದ ಬಳಲುತ್ತಿದ್ದ ಉತ್ತಮ್ ಮೊಹಂತಿ ಅವರು ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟನ ನಿಧನದ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಉತ್ತಮ್ ಮೊಹಂತಿ ಅವರ ಆರೋಗ್ಯ ತುಂಬ ಬಿಗಡಾಯಿಸಿದ ಕಾರಣ ಫೆಬ್ರವರಿ 8ರಂದು ಭುವನೇಶ್ವರದಿಂದ ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಉತ್ತಮ್ ಮೊಹಂತಿ ಅವರು ಪತ್ನಿ, ನಟಿ ಅಪರಾಜಿತಾ ಮೊಹಂತಿ ಹಾಗೂ ನಟನೂ ಆಗಿರುವ ಪುತ್ರ ಬಬುಶನ್ ಅವರನ್ನು ಅಗಲಿದ್ದಾರೆ.
“ಒಡಿಶಾದ ಖ್ಯಾತ ನಟ ಉತ್ತಮ್ ಮೊಹಂತಿ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ಅಗಲಿಕೆಯಿಂದ ಒಡಿಯಾ ಕಲೆಗೆ ತುಂಬಲಾರದ ನಷ್ಟವಾಗಿದೆ. ಆದರೆ, ಅವರು ಸಿನಿಮಾ ಪ್ರಿಯರ ಮನಸ್ಸಿನಲ್ಲಿ ಮೂಡಿಸಿದ ಛಾಪು ಅಚ್ಚಳಿಯದೆ ಉಳಿಯಲಿದೆ. ದೇವರು ಉತ್ತಮ್ ಮೊಹಂತಿ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋಹನ್ ಚರಣ್ ಮಾಝಿ ಪೋಸ್ಟ್ ಮಾಡಿದ್ದಾರೆ.
1977ರಲ್ಲಿ ಸಿನಿಮಾರಂಗ ಪ್ರವೇಶಿಸಿದ ಉತ್ತಮ್ ಮೊಹಂತಿ ಅವರು ಒಡಿಯಾದ ಸುಮಾರು 130 ಸಿನಿಮಾಗಳಲ್ಲಿ ನಟಿಸಿದ್ದರು. ಬೆಂಗಾಲಿಯ 30 ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಬಾಲಿವುಡ್ ನ ನಯಾ ಜಹೆರ್ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲೂ ನಟಿಸಿ ಮನೆಮಾತಾಗಿದ್ದರು.