ಬಾಲಿವುಡ್ ಸಿನಿಮಾರಂಗದಲ್ಲಿ 7 ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ ಹಿರಿಯ ನಟಿ ಕಾಮಿನಿ ಕೌಶಲ್ ನಿಧನರಾಗಿದ್ದಾರೆ. 98 ವರ್ಷದ ಹಿರಿಯ ನಟಿ ಕಾಮಿನಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು (ನ.14) ನಟಿ ವಿಧಿವಶರಾಗಿದ್ದಾರೆ. 1946ರಲ್ಲಿ ತೆರೆಕಂಡ ನೀಚಾ ನಗರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾಮಿನಿ ಕೌಶಲ್ 70 ವರ್ಷದ ಚಿತ್ರರಂಗದಲ್ಲಿ ಹಲವು ರೀತಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕಾಮಿನಿ ಕೌಶಲ್ ಧೋ ಭಾಯಿ, ಜಿದ್ದಿ, ಶಬ್ನಮ್, ನಮೂನಾ, ಝಂಜಾರ್, ಬಡೆ ಸರ್ಕಾರ್, ನೈಟ್ ಕ್ಲಬ್, ಗೋದಾನ್, ಪ್ರೇಮ್ ನಗರ್, ಮಹಾ ಚೋರ್ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಅಂದಹಾಗೆ ಕಾಮಿನಿ ಕೌಶಲ್ ಮೂಲ ಹೆಸರು ಉಮಾ ಕಶ್ಯಪ್. ಸಿನಿಮಾ ರಂಗಕ್ಕೆ ಬಂದ ಬಳಿಕ ಕಾಮಿನಿ ಕೌಶಲ್ ಆಗಿದ್ದಾರೆ.
ದಿಗ್ಗಜ ನಟಿ ಕಾಮಿನಿ ಕೌಶಲ್ ಲಾಹೋರ್‌ನಲ್ಲಿ ಜನಿಸಿದ್ದು, ಇವರು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದವರಾಗಿದ್ದರು. ಇವರ ತಂದೆ ಶಿವರಾಮ್ ಕಶ್ಯಪ್ ಸಸ್ಯಶಾಸ್ತ್ರಜ್ಞರಾಗಿದ್ದರು. ಕಾಮಿನಿ ಕೌಶಲ್ ಚಿಕ್ಕಂದಿನಿಂದಲೇ ಕುದುರೆ ಸವಾರಿ, ಭರತನಾಟ್ಯ, ಈಜು, ಕರಕುಶಲ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೇ ರಂಗಭೂಮಿ, ರೇಡಿಯೋ ನಾಟಕಗಳು ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.
2022ರಲ್ಲಿ ತೆರೆಕಂಡ ಲಾಲ್‌ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಮಿನಿ ಕೌಶಲ್ ಕಾಣಿಸಿಕೊಂಡಿದ್ದರು. 2025ರ ಫೆಬ್ರವರಿಯಲ್ಲಿ 98ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ ದಿಗ್ಗಜ ನಟಿ ಕಾಮಿನಿ ಕೌಶಲ್ ಇದೀಗ ಇಹಲೋಕ ತ್ಯಜಿಸಿದ್ದಾರೆ. ನಟಿ ಸಾವಿಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ : ರಾಹುಲ್ ಗಾಂಧಿ ಕಾಂಗ್ರೆಸ್‌ನ್ನು ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೋ ಲೆಕ್ಕವೇ ಇಲ್ಲ | ಆರ್.ಅಶೋಕ್ ಲೇವಡಿ



















