ಮುಂಬೈ | ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇದೇ ಡಿಸೆಂಬರ್ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು.
ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು, ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನೇಕ ಬಾಲಿವುಡ್ ತಾರೆಯರು ಅವರನ್ನ ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದರು. ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, ರಿತೇಶ್ ದೇಶ್‌ಮುಖ್, ಜೆನಿಲಿಯಾ ದೇಶ್‌ಮುಖ್, ಅಮೀಷಾ ಪಟೇಲ್ ಸೇರಿದಂತೆ ಮುಂತಾದ ಸ್ಟಾರ್ ನಟ-ನಟಿಯರು ಮುಂಬೈನ್ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ ಧರ್ಮೇಂದ್ರ ಅವರ ಆರೋಗ್ಯವನ್ನ ವಿಚಾರಿಸಿದ್ದರು.
ಇದಾದ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು.
ಸೂಪರ್ ಹಿಟ್ ಸಿನಿಮಾ ನೀಡಿದ್ದ ಧರ್ಮೇಂದ್ರ
ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿ ಮರೆದಿದ್ದ ಧರ್ಮೇಂದ್ರ ಅವರು ದಶಕಗಳ ಕಾಲ ಸಿನಿಮಾ ರಂಗವನ್ನ ಆಳಿದ್ದರು ಅಂದ್ರೂ ತಪ್ಪಾಗಲಾರದು. ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ, ಇದಕ್ಕೆ ಸಾಕ್ಷಿ ಎನ್ನುವಂತೆ ತನ್ನ ಸಿನಿರಂಗದ ಪ್ರಯಾಣದಲ್ಲಿ ಏನೆಲ್ಲಾ ಅಂದರೂ ಕೂಡ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ʻಶೋಲೆʼ, ʻಚುಪ್ಕೆ ಚುಪ್ಕೆʼ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಗೆ ಇವರದ್ದಾಗಿತ್ತು.
ಇದನ್ನೂ ಓದಿ : 23 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕ್ಯೂಂಕಿ’ ಧಾರಾವಾಹಿ ಜೋಡಿ



















