ಬೆಂಗಳೂರು: ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ಬಿಂದು ಘೋಷ್(76) (Bindu Ghosh) ಇಹಲೋಕ ತ್ಯಜಿಸಿದ್ದಾರೆ.
ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಬಿಂದು ಘೋಷ್ ಅವರು ಹೆಚ್ಚು ಸಕ್ರಿಯವಾಗಿದ್ದರು. ತಮಿಳು ಮಾತ್ರಲ್ಲದೇ ತೆಲುಗು, ಮಲಯಾಳ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. 1982ರಲ್ಲಿ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ‘ಕೋಳಿ ಕೂವುದು’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ವೇಳೆ ಪ್ರಭು ಗಣೇಶನ್ ಜೊತೆ ನಟಿಸಿದ್ದರು.
ಮೊದಲ ಸಿನಿಮಾದ ನಂತರ ಬಿಂದು ಘೋಷ್ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕವು. ಉರುವಂಗಲ್ ಮಲರಂ, ಡೌರಿ ಕಲ್ಯಾಣಂ, ತಲೈ ಮಗನ್, ಸೂರಕೊಟ್ಟೈ ಸಿಂಗಕುಟ್ಟಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ರಜನಿಕಾಂತ್, ಕಮಲ್ ಹಾಸನ್, ಶಿವಾಜಿ ಗಣೇಶನ್, ವಿಜಯಕಾಂತ್, ಪ್ರಭು ಗಣೇಶನ್ ಮುಂತಾದ ನಟರ ಜೊತೆ ಬಿಂದು ಘೋಷ್ ಅವರು ಅಭಿನಯಿಸಿದ್ದರು.