ಬೆಂಗಳೂರು: ಸಿಂಫೋನಿ ಸ್ವರ ಪ್ರತಿಷ್ಠಾನ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಸವಿ ನೆನಪಿನಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪ್ರಣಯರಾಜ ಡಾ.ಶ್ರೀನಾಥ್ ಅವರಿಗೆ ‘ರಾಜ್ ರತ್ನ’ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ರವೀಂದ್ರನಾಥ್ ಅವರಿಗೆ ‘ಪುನೀತ್ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ, ಅವರಿಗೆ ಹಾಗೂ ನಟಿ ರೂಪಿಕಾ ಅವರಿಗೂ ಗೌರವ ಸಮರ್ಪಣೆ ಮಾಡಲಾಯಿತು. ನಟ ಶ್ರೀನಾಥ್ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚಿ ಮಾತನಾಡುತ್ತ ಕಲೆಯನ್ನು, ಕಲಾವಿದರನ್ನು ಬೆಳೆಸುತ್ತಿದ್ದೀರಿ. ಪ್ರತಿಭೆಗಳನ್ನು ಹುಟ್ಟುಹಾಕುವ ನಿಮ್ಮ ಕೆಲಸ ಅಭಿನಂದನಾರ್ಹ ಎಂದು ಶುಭ ಹಾರೈಸಿದರು.
ಸಿಂಫೋನಿ ಸ್ವರ ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್.ಕೆ.ಅನಂತು, ಕಾರ್ಯದರ್ಶಿ ಸಿಂಫೋನಿ ಶಿವು ಇದ್ದರು. ಈ ವೇಳೆ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿನಯದ ಚಲನಚಿತ್ರಗಳ ನೂರಾರು ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು.