ದಾವಣಗೆರೆ: ಕಗ್ಗಂಟಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊನೆಗೂ ಇಂದು ಘೋಷಣೆಯಾಗಿದೆ. ಅಲ್ಪಸಂಖ್ಯಾತರ ತೀವ್ರ ಪೈಪೋಟಿಯ ನಡುವೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಪಕ್ಷ ಮಣೆ ಹಾಕಿದೆ.
ತಮಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಮರ್ಥ್ ಶಾಮನೂರು ದುಗ್ಗಮ್ಮ ದೇವಿಯ ದರ್ಶನ ಪಡೆದರು. ನಂತರ ಕುರುವರ ಕೇರಿಯಲ್ಲಿ ಮನೆ ಮನೆ ಪ್ರಚಾರ ನಡೆಸಿ ಮುಖಂಡರನ್ನು ಭೇಟಿಯಾದರು.
ತಮಗೆ ಟಿಕೆಟ್ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ, “ಟಿಕೆಟ್ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ದುಗ್ಗಮ್ಮ ದೇವಸ್ಥಾನಕ್ಕೆ ಬಂದಿದ್ದೆ. ಆಗ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗಿದೆ ಎಂದು ಗೊತ್ತಾಯಿತು. ಕಾರ್ಯಕರ್ತರೂ ಕೂಡ ಅಧಿಕೃತವಾಗಿ ಅನೌನ್ಸ್ ಆಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಪಕ್ಷ ಪ್ರತಿಸಲವೂ ಗೆದ್ದಿದೆ. ಈ ಬಾರಿನೂ ಗೆದ್ದೇ ಗೆಲ್ಲುತ್ತೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಸಮರ್ಥ್ ಶಾಮನೂರುಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಹಿನ್ನಲೆ ಪಕ್ಷದ ಕಾರ್ಯಕರ್ತರು ದಾವಣಗೆರೆ ನಗರದ ಕುರುಬರಕೇರಿಯಲ್ಲಿ
ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಬಿರುಸಿನ ಪ್ರಚಾರ ಕೈಗೊಂಡ ಸಮರ್ಥ್, ಕಾರ್ಯಕರ್ತರೊಂದಿಗೆ ಬರಿಗಾಲಿನಲ್ಲಿ ಮನೆ ಮನೆಗೆ ಭೇಟಿ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಚಪ್ಪಲಿ ಧರಿಸದೇ ತಾಯಿ ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಪ್ರಚಾರ ಮಾಡಿದ್ದರು ಈಗಲೂ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿ, “ನನ್ನ ಕಾಲನ್ನು ನೋಡ್ಬೇಡಿ. ಅದು ನನ್ನ ಮತ್ತು ದೇವರ ಮಧ್ಯೆ ಇರುವ ಸಂಕಲ್ಪ” ಎಂದರು. ಇದೇ ವೇಳೆ, ಅಲ್ಪಸಂಖ್ಯಾತರನ್ನು ಸಮಾಧಾನ ಮಾಡುವ ಕೆಲಸ ಮಾಡಲಿದ್ದೇನೆ. ಚುನಾವಣೆ ಎಂದರೆ ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಇವರು 30 ವರ್ಷಗಳ ಕಾಲ ನಮ್ಮ ತಾತರೊಂದಿಗೆ ಬೆರೆತವರು. ಸಾಕಷ್ಟು ಜನರು ನಮ್ಮ ಮನೆಗೆ ಬಂದಿದ್ದಾರೆ. ನಾನೂ ಅವರ ಮನೆಗೆ ಹೋಗಿದ್ದೇನೆ. ಟಿಕೆಟ್ ವಿಚಾರವಾಗಿ ಅಂಥದ್ದೇನೂ ಆಗಿಲ್ಲ. ಅಲ್ಪಸಂಖ್ಯಾತರು ಯಾರೂ ನೋಟಾ ಹಾಕಲ್ಲ. ಅದು ಸಾಧ್ಯನೇ ಇಲ್ಲ. ದಾವಣಗೆರೆ ಶಾಂತಿಯ ನಗರ. ಅಲ್ಪಸಂಖ್ಯಾತರನ್ನು ಕರೆಸುತ್ತೇವೆ. ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪ್ರಚಾರ ಈಗಾಗಲೇ ಶುರು ಮಾಡಿದ್ದೇನೆ. ಜನ ಸಂಪರ್ಕ ಚೆನ್ನಾಗಿದೆ ಎಂದೇ ಟಿಕೆಟ್ ಕೊಟ್ಟಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಪಾಲಿಗೆ ತಲೆನೋವಾಗಿದ್ದ ಉಪಚುನಾವಣೆ- ದಾವಣಗೆರೆ, ಬಾಗಲಕೋಟೆ ಅಭ್ಯರ್ಥಿಗಳ ಘೋಷಣೆ


















