ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳ ಪ್ರಮಾಣ ಏರಿಕೆಯಾಗುತ್ತಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲೇ ಹಲವು ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ನಿಯಮ ಉಲ್ಲಂಘಿಸಿ ನಿಲ್ಲಿಸಿದ್ದ ವಾಹನಗಳಿಗೆ ಲಾಕ್ ಹಾಕಿದ್ದಾರೆ.
ಮೊದಲು ಖಾಸಗಿ ವಾಹನಗಳಿಗೆ ಮಾತ್ರ ಲಾಕ್ ಹಾಕಲಾಗಿತ್ತು. ಆದರೆ ಅದೇ ಸ್ಥಳದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನಕ್ಕೆ ಲಾಕ್ ಹಾಕದಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಪೊಲೀಸರನ್ನು ಪ್ರಶ್ನಿಸಿದರು. ಸರ್ಕಾರಿ ವಾಹನಗಳಿಗೂ ದಂಡ ಹಾಕಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆಯ ಪ್ರಶ್ನೆಗೆ ಸ್ಪಂದಿಸಿದ ಪೊಲೀಸರು ನಂತರ ಸರ್ಕಾರಿ ವಾಹನಕ್ಕೂ ಲಾಕ್ ಹಾಕಿ, ಚಾಲಕನಿಗೆ ದಂಡ ವಿಧಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಯಮ ಎಲ್ಲರಿಗೂ ಸಮಾನ ಎಂಬ ಸಂದೇಶ ನೀಡಿದ ಕ್ರಮ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ವೇಳೆ ನಗರದಲ್ಲಿ ನೋ ಪಾರ್ಕಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಇದನ್ನೂ ಓದಿ: ಚಂದ್ರು ಲಮಾಣಿ-ಗುತ್ತಿಗೆದಾರನ ನಡುವಿನ ಆಡಿಯೋ ರಿಲೀಸ್



















