ಹುಬ್ಬಳ್ಳಿ: ವೀರಶೈವ-ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಸೆ. 19ರಂದು ಇಲ್ಲಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಸರ್ಕಾರ ಜನಗಣತಿ ನಿರ್ಣಯ ಮಾಡಿದೆ. ಹಿಂದೆ ಜನಗಣತಿ ಆದಾಗ ಸಮಾಜದಿಂದ ವಿರೋಧ ವ್ಯಕ್ತವಾದ ಕಾರಣ ಮತ್ತೊಂದು ಜನಗಣತಿಗೆ ಸಿದ್ಧತೆ ನಡೆದಿದೆ. ಶುಕ್ರವಾರ ನಾವು ನೂರಾರು ಮಠಪತಿಗಳು ಸೇರಿ ಸಭೆ ನಡೆಸಿ ಚರ್ಚಿಸಿದ್ದೇವೆ. ವೀರಶೈವ ಹಾಗೂ ಲಿಂಗಾಯತ ಎರಡು ಬೇರೆಯಲ್ಲ. ಎರಡೂ ಒಂದೇ. ಬೇರೆ ಎಂದು ಇಬ್ಭಾಗ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಖಂಡಿಸುತ್ತೇವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ನಿಲುವು ಅದೇ ಆಗಿರುತ್ತದೆ. ಅದರ ಪರವಾಗಿಯೇ ನಾವು ಇರುತ್ತೇವೆ. ಲಿಂಗಾಯತ ಧರ್ಮ ಮಾಡಬೇಕೆಂಬುದು ಬಸವಣ್ಣ ಹೆಸರು ಬಳಕೆ ಮಾಡಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ತತ್ವ ಪ್ರಧಾನ ಧರ್ಮ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಬಸವ ಸಂಸ್ಕೃತಿ ಯಾತ್ರೆ ಹೆಸರಲ್ಲಿ ವೈದಿಕ ಸಂಸ್ಕೃತಿ ವಿರೋಧಿಸುತ್ತಿದ್ದಾರೆ. ಆ ವೇದಿಕೆಯಲ್ಲಿ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರೇ ಅದರ ನೇತೃತ್ವ ವಹಿಸಿದ್ದಾರೆ. ಅವರ ನಡೆ, ನುಡಿ ಭಿನ್ನವಾಗಿದೆ. ಪ್ರತ್ಯೇಕ ಲಿಂಗಾಯತ ಆಗಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಹೇಳಿದ್ದಾರೆ.
ಮಠಾಧೀಶರೆಲ್ಲಾ ಸೇರಿ ಸೆ.19ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ, ನಮ್ಮ ನಿಲುವು ತಿಳಿಸುತ್ತೇವೆ. ಗೊಂದಲ ನಿವಾರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಸಮಾವೇಶದಲ್ಲಿ ರಾಜ್ಯದ ಎಲ್ಲ ಚುನಾಯಿತ ಪ್ರ ತಿನಿಧಿಗಳು ಇರುತ್ತಾರೆ. ಇದು ಶಕ್ತಿ ಪ್ರದರ್ಶನವಲ್ಲ. ಉಳಿವಿನ ಪ್ರದರ್ಶನ ಎಂದು ತಿಳಿಸಿದ್ದಾರೆ.