ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಎಂದಿನಂತೆ ತನ್ನ ಪ್ರಬಲ ತಂಡ ಕಟ್ಟಿಕೊಂಡು, ಕರಾವಳಿಗರಿಗಾಗಿ ಹೊಸ ಪ್ರಯೋಗಕ್ಕೆ ಅಡಿ ಇಟ್ಟಿದ್ದಾರೆ. ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ “ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿ ತೆರೆಯ ಮೇಲೆ ರಾರಾಜಿಸಿ, ವಿಜೃಂಭಿಸಲು ಸಿದ್ಧವಾಗಿದೆ” ಎಂಬ ವಾಗ್ದಾನದೊಂದಿಗೆ “ವೀರ ಚಂದ್ರಹಾಸ” ಎಂಬ ಪ್ರಸಂಗವನ್ನು ಬೆಳ್ಳಿ ಪರೆದೆಗೆ ತರಲು ತಯಾರಿ ನಡೆಸುತ್ತಿದ್ದಾರೆ. ಮೊದಲ ಆಕರ್ಷಣೆಯ ರೂಪದಲ್ಲಿ ಬಿಡುಗಡೆ ಕಂಡ ‘ಟೀಸರ್’ನಲ್ಲಿ ‘ವೀರ ಚಂದ್ರಹಾಸ’ ಭರ್ಜರಿಯಾಗಿ ಕಾಣಿಸಿಕೊಂಡು, ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಕರಾವಳಿಯಲ್ಲಿ ಯಕ್ಷಗಾನಕ್ಕೆ ಸಿನಿಮಾಗೂ ಮೀರಿದ ಅಭಿಮಾನವಿದೆ. ಅಂಥ ಯಕ್ಷಗಾನದ ಸುಪ್ರಸಿದ್ದ ಪ್ರಸಂಗವೊಂದನ್ನ ಬೆಳ್ಳಿ ಪರದೆ ಮೇಲೆ ತರುವ ಪ್ರಯತ್ನ ಮಾಡಿದ್ದಕ್ಕೆ ಯಕ್ಷಪ್ರೇಮಿಗಳು ನಿರ್ದೇಶಕ ರವಿ ಬಸ್ರೂರು ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸಲೇಬೇಕೆಂಬ ಆಶಯದಲ್ಲಿದ್ದಂತಿದೆ. ಅದರಂತೆಯೇ, ನೋಡುಗರ ಸಂಖ್ಯೆ ಲಕ್ಷ ದಾಟಿಸಿಕೊಂಡಿದ್ದು ಎಲ್ಲೆಡೆ ಭಾರೀ ಮೆಚ್ಚುಗೆ ಗಳಸಿ, ‘ಟೀಸರ್’ ಸಖತ್ ಸೌಂಡು ಮಾಡುತ್ತಿದೆ.
ಒಟ್ಟಿನಲ್ಲಿ ಯಕ್ಷಗಾನದ ಅನುಭವಿ ತಂಡದೊಂದಿಗೆ ಯುವ ಕಲಾವಿದರನ್ನೂ ಸಮಾಗಮ ಮಾಡಿಕೊಂಡು, ಬೆಳ್ಳಿ ತೆರೆಯ ಮೇಲೆ ಯಕ್ಷಗಾನದ ರಸಧಾರೆ ಹರಿಸಲು ‘ವೀರ ಚಂದ್ರಹಾಸ’ ತೆರೆಮರೆ ಕಸರತ್ತು ನಡೆಸುತ್ತಿದ್ದಾನೆ. ಟೀಸರ್ ಬಿಡುಗಡೆಯಾದ ನಿಟ್ಟಲ್ಲೇ ಹೇಳುವುದಾದರೇ, ಸದ್ಯದಲ್ಲೇ ಚಂದನವನಕ್ಕೆ ಚಂದ್ರಹಾಸನ ಪ್ರವೇಶವಾಗಲಿದೆ.
