ಬೀದರ್ : ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಸವಕಲ್ಯಾಣ ಐತಿಹಾಸಿಕ ತಿಪುರಾಂತ್ ಕೆರೆ ಒಡೆದು 3 ಗ್ರಾಮಗಳ ಸಂಪರ್ಕ ಕಟ್ ಆಗಿದೆ. ಬಸವಕಲ್ಯಾಣ ಶಾಸಕ ಶರಣು ಸಲಗಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಾಂಜ್ರಾ ನದಿ ಪ್ರವಾಹದಿಂದ ಹಲವು ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಸತತ ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಮಾಂಜ್ರಾ ನದಿಗೆ ಹರಿದು ಬರುತ್ತಿದೆ. ಹೀಗಾಗಿ ವಿವಿಧ ಗ್ರಾಮಗಳ ಸೇತುವೆ ಮುಳುಗಡೆಯಾಗಿವೆ.
ಭಾಲ್ಕಿ- ಮಹಾರಾಷ್ಟ್ರ ಔರಾದ ಲಾತುರ್ ಗೆ ಹಾದು ಹೋಗುವ ಮುಖ್ಯರಸ್ತೆಯ ಇಂಚೂರ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ತಾಲ್ಲೂಕು ಹಾಗೂ ಮಹಾರಾಷ್ಟ್ರದ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.



















