ನಾಲ್ಕು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ, ಧಾರಾವಾಹಿಗಳಲ್ಲೂ ಅಭಿನಯಿಸಿರುವ ಅರ್ಜುನ್ ಯೋಗಿ ಈಗ ಹಳ್ಳಿ ಸೊಗಡಿನ ಕಥೆ ಹೊಂದಿರುವ ವರ್ಣ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.

ಶೂಟಿಂಗ್ ಮುಗಿಸಿರುವ ವರ್ಣ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕರ ಪುತ್ರ ವರ್ಷನ್ ಚೌಧರಿ ಟ್ರೇಲರ್ ಅನಾವರಣ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ “ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ” ಎಂಬ ಮಾತೇ ಈ ಚಿತ್ರದ ಕಥೆಗೆ ಸ್ಪೂರ್ತಿ ಎಂದು ನಿರ್ದೇಶಕ ದೇವ ಶರ್ಮ ಹೇಳಿದ್ದಾರೆ. ಮೊದಲು ಇದನ್ನು ಕಿರುಚಿತ್ರ ಮಾಡಲು ಹೊರಟಿದ್ದೆವು. ಆದರೆ, ಕಥೆ ಕೇಳಿದ ನಿರ್ಮಾಪಕ ಮಲ್ಲೇನೇನಿ ನವೀನ್ ಚೌಧರಿ, ಕಥೆ ಚೆನ್ನಾಗಿದೆ. ಕಿರುಚಿತ್ರ ಬೇಡ. ಎಲ್ಲಾ ಸಿನಿಮಾಗಳಂತೆಯೇ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡೋಣ ಎಂದು ನಮ್ಮ ಬೆನ್ನೆಲುಬಾಗಿ ನಿಂತರು. ಅವರಿಲ್ಲದೇ ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ನಾಯಕನಾಗಿ ಅರ್ಜುನ್ ಯೋಗಿ, ನಾಯಕಿಯಾಗಿ ಭವ್ಯ ಗೌಡ, ವಿಲನ್ ಪಾತ್ರದಲ್ಲಿ ಲಂಕೇಶ್ ರಾವಣ ನಟಿಸಿದ್ದಾರೆ. ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ, ಚಿತ್ರ ಕೂಡ ಚೆನ್ನಾಗಿ ಬಂದಿದೆ’ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಚಿತ್ರಕ್ಕೆ ರಮೇಶ್ ಕೃಷ್ಣ ಸಂಗೀತ ನಿರ್ದೇಶನ, ಗೌರಿ ವೆಂಕಟೇಶ್ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ, ಚಿನ್ನಯ್ಯ ಮಾಸ್ಟರ್ – ಸಾಗರ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಗೀತಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈಗ ಟೀಸರ್ ಅನಾವರಣ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.


















