ಬೆಂಗಳೂರು : ಕಾಂಗ್ರೆಸ್ ಪ್ರಬಲ ನಾಯಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸದ ಬೆನ್ನಲ್ಲೆ ರಾಜಕೀಯ ಚಟುವಟಿಗಳು ಗರಿಗೆದರಿದೆ. ರಾಜಣ್ಣ ಅವರ ಪರ ನಿಲ್ಲಲು ವಾಲ್ಮೀಕಿ ಸಮುದಾಯದ ಶಾಸಕರು ಮುಂದಾಗಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಲೆಂದೆ ವಾಲ್ಮೀಕಿ ಸಮುದಾಯದ ಶಾಸಕರ ನಿಯೋಗ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದೆ ಎನ್ನಲಾಗಿದೆ. ಈಗಾಗಲೇ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಸಭೆ ನಡೆಸಿದ್ದಾರೆ.
ಈ ನಡುವೆ ಮಾಧ್ಯಮದವರಿಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ ಮಾತನಾಡಿದ್ದು, ಅಧಿಕಾರ ಇದ್ದಾಗ ಮಾತ್ರ ಭೇಟಿ ಮಾಡುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೂ ಸ್ನೇಹಪೂರ್ವಕವಾಗಿ ಭೇಟಿ ಮಾಡಿದ್ದೇವೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ. ಅಧಿವೇಶನದ ಬಳಿಕ ದೆಹಲಿಗೆ ನಿಯೋಗ ತೆರಳಲಿದೆ ಎಂದು ತಿಳಿಸಿದ್ದಾರೆ.
ಇನ್ನು, ಕಾಂಗ್ರೆಸ್ ಪಕ್ಷದಲ್ಲಿ ವಾಲ್ಮೀಕಿ ಸಮಾಜದವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಾಜಣ್ಣ ವಜಾ ಬಳಿಕ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ದೇವೇಂದ್ರಪ್ಪ, ತುರುವಿಹಾಳ್, ರಘುಮೂರ್ತಿ, ಕೂಡ್ಲಿಗಿ ಶ್ರೀನಿವಾಸ, ಅನಿಲ್ ಚಿಕ್ಕಮಾಧು, ರಾಜಣ್ಣ ಪುತ್ರ ಆರ್.ರಾಜೇಂದ್ರ ಸೇರಿದಂತೆ ಹಲವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
“ಕುತೂಹಲ ಮೂಡಿಸಿದೆ ಶಾಸಕರ ನಡೆ”
ವಿಧಾನಸಭೆ ಆವರಣದಲ್ಲಿರುವ ಸಿಎಂ ಕಚೇರಿಗೆ ತೆರಳಿದ ವಾಲ್ಮೀಕಿ ಸಮಾಜದ ನಾಯಕರು ಸಿದ್ದರಾಮಯ್ಯ ಬಳಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ವಾಲ್ಮೀಕಿ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದರು, ಎಸ್‌ಸಿ, ಎಸ್‌ಟಿ ಶಾಸಕರ ನಡೆ ಕುತೂಹಲ ಮೂಡಿಸಿದೆ.