ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation scam) ಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಸೋಮವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಅದರಲ್ಲಿ 12 ಆರೋಪಿಗಳ ಹೆಸರು ಉಲ್ಲೇಖವಿದೆ ಎನ್ನಲಾಗಿದೆ.
ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಇಡಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ನಾಗೇಂದ್ರ ಹೆಸರು ಇಲ್ಲ. ಅಲ್ಲದೇ, ಮತ್ತೋರ್ವ ಶಾಸಕ ಬಸನಗೌಡ ದದ್ದಲ್ ಅವರ ಹೆಸರು ಕೂಡ ಇಲ್ಲ ಎನ್ನಲಾಗಿದೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಒಟ್ಟು ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ನಲ್ಲಿ ಹಣ, ಚಿನ್ನ, ಕಾರು ಸೇರಿದಂತೆ 50 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಎಸ್ ಐಟಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಮೊದಲು ಬಂಧನವಾಗಿರುವ ಆರೋಪಿಗಳ ವಿರುದ್ಧ ಮಾತ್ರ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸತ್ಯನಾರಾಯಣ ವರ್ಮಾ( ಹೈದರಾಬಾದ್) , ಪದ್ಮನಾಭ (ವ್ಯವಸ್ಥಾಪಕ), ಪರುಶುರಾಮ್ ( ಲೆಕ್ಕಾಧಿಕಾರಿ), ನೆಕ್ಕುಂಟಿ ನಾಗರಾಜ್ (ನಾಗೇಂದ್ರ ಆಪ್ತ), ನಾಗೇಶ್ವರ್ ರಾವ್(ನೆಕ್ಕುಂಟಿ ನಾಗರಾಜ್ ಸಂಬಂಧಿ), ಸತ್ಯನಾರಾಯಣ ಇಟ್ಕಾರಿ ತೇಜಾ (ಫಸ್ಟ್ ಫೈನಾನ್ಸ್ ಅಧ್ಯಕ್ಷ), ಜಗದೀಶ್ (ಉಡುಪಿ), ತೇಜಾ ತಮ್ಮಯ್ಯ(ಬೆಂಗಳೂರು), ಪಿಟ್ಟಲ ಶ್ರೀನಿವಾಸ್ ಗಚ್ಚಿಬೌಲಿ(ಆಂಧ್ರ ಪ್ರದೇಶ), ಸಾಯಿತೇಜ(ಹೈದರಾಬಾದ್) ಸೇರಿದಂತೆ 12 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಅವರ ಹೆಸರಿಲ್ಲದಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಹೀಗಾಗಿ ಈ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಕೋರ್ಟ್ ಈ ಚಾರ್ಜ್ ಶೀಟ್ ನ್ನು ಸ್ವೀಕರಿಸಿ, ವಿಚಾರಣೆ ನಡೆಸಲು ಆರಂಭಿಸಿದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಹಿನ್ನಡೆಯಾದಂತಾಗಲಿದೆ.