ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದಲ್ಲಿ (Valmiki Development Corporation) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ (SIT) ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಾಕಿ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈ ವ್ಯಕ್ತಿ ಮೂಲತಃ ವಿಜಯವಾಡದನಾಗಿದ್ದು, 2 ವರ್ಷಗಳಿಂದ ಬೆಂಗಳೂರಿನ ಯಶವಂತಪುರದ ಹತ್ತಿರ ವಾಸಿಸುತ್ತಿದ್ದ. ಅಕ್ರಮ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈತ ನಗರಕ್ಕೆ ಬಂದ ತಕ್ಷಣ ಎಸ್‌ಐಟಿ ಬಂಧಿಸಿದೆ. ನಂತರ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಯು ಶ್ರೀನಿವಾಸ್ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದಾನೆ. ಈತ ಹಲವು ವರ್ಷಗಳಿಂದ ಸತ್ಯನಾರಾಯಣ ವರ್ಮಾನ ಸ್ನೇಹ ಬೆಳೆಸಿದ್ದ. ಹೀಗಾಗಿ ಸತ್ಯನಾರಾಯಣ ವರ್ಮಾನ ಅಕ್ರಮ ಹಣ ವರ್ಗಾವಣೆಯಲ್ಲಿ ಶ್ರೀನಿವಾಸ್ ಕೂಡ ಭಾಗಿಯಾಗಿದ್ದ.
ಹಿಂದೆ ವಾಲ್ಮೀಕಿ ಪ್ರಕರಣದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಅಭಿವೃದ್ಧಿ ಮಂಡಳಿಯಲ್ಲಿ 14 ಕೋಟಿ ರೂ. ನುಂಗಿದ ಕೇಸ್‌ನಲ್ಲಿ ಸತ್ಯನಾರಾಯಣ ವರ್ಮಾ ಜೊತೆ ಶ್ರೀನಿವಾಸ್ ಕೂಡ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದಿದ್ದ. ಆದರೂ ಮತ್ತೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬಂಧಿಸಿರುವ ಅಧಿಕಾರಿಗಳು ಈತನ ಪಾತ್ರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
