ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ನೇರ ಹೊಣೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಸಚಿವ ನಾಗೇಂದ್ರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇಡೀ ಸಂಪುಟವೇ ಭಾಗಿಯಾಗಿದೆ. ಎಲ್ಲಾ ನಿಗಮ ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಒತ್ತಾಯಿಸಿದರು.
ಹಲವಾರು ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಕುರಿತು ದಾಖಲೆಗಳೇ ಬಹಿರಂಗ ಆಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಏಕೆ ಹೋಯಿತು? ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ಅಷ್ಟೂ ದೊಡ್ಡ ಮೊತ್ತ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ. ಸಿಎಂ ಸೇರಿದಂತೆ ಇಡೀ ಸಂಪುಟವೇ ಶಾಮೀಲಾಗಿದೆ ಎಂದು ಹೇಳಿದ್ದಾರೆ.
ಹಗರಣಕ್ಕೆ ಸಂಬಂಧಿಸಿ 14 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಖಾತೆಗಳನ್ನು ತೆರೆದವರು ಯಾರು? ಯಾವೆಲ್ಲ ಕಾಣದ ಕೈಗಳು ಇವುಗಳ ಹಿಂದೆ ಇವೆ? ಎಲ್ಲಾ ಹೊರಗೆ ಬರಬೇಕು ಅಲ್ಲವೇ? ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಎನ್ನುವುದು ಇದೆಯಾ? ಎಲ್ಲಾ ನಿಗಮ ಮಂಡಳಿಗಳ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆದರೆ ಇನ್ನೆಷ್ಟು ಅಕ್ರಮಗಳು ಹೊರಗೆ ಬರುತ್ತವೇ ಗೊತ್ತಿಲ್ಲ ಎಂದು ಹೇಳಿದ್ದಾರೆ.