ತಿರುಪತಿ :- ಜನವರಿ 10 ರಂದು ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರ ದಂಡೇ ತಿರುಪತಿಯ ತಿರುಮಲವಾಸನ ದರ್ಶನಕ್ಕೆ ಅಗಮಿಸುತ್ತಿದ್ದಾರೆ. ಶತಾಯಗತಾಯ ವೈಕುಂಠ ಏಕಾದಶಿದಂದು ಶ್ರೀನಿವಾಸನ ದರ್ಶನ ಪಡೆದು, ಸ್ವರ್ಗದ ಬಾಗಿಲನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ, ಇದರ ಮಧ್ಯೆಯೇ ಭೀಕರ ದುರಂತವೊಂದು ನಡೆದಿದೆ.
ಜನವರಿ 10 ರಂದು ವೈಕುಂಠ ಏಕಾದಶಿಯ ದಿನ ಶ್ರೀನಿವಾಸನ ದರ್ಶನಕ್ಕೆ ನೀಡುವ ಪಾಸುಗಳನ್ನು ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು, ತಲ್ಲಾಟ ನೂಕಾಟದಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ. ಒಬ್ಬರ ಮೇಲೊಬ್ಬರು ಪಾಸು ಪಡೆಯಲು ನುಗ್ಗಿದ್ದು, ಇದೇ ಬಹಳ ದೊಡ್ಡ ದುರಂತಕ್ಕೆ ಕಾರಣವಾಗಿದೆ.
ನಿನ್ನೆ ರಾತ್ರಿ 8 ಘಂಟೆಯ ಸುಮಾರಿಗೆ, 10 ನೇ ತಾರೀಖಿನ ದರ್ಶನಕ್ಕಾಗಿ ಪಾಸು ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಪಾಸುಗಳನ್ನು ಪಡೆಯಲು ಭಕ್ತರು ಏಕಾಏಕಿ ಕೌಂಟರ್‌ಗಳತ್ತ ನುಗ್ಗಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿ ಕೆಲ ಭಕ್ತರು ಆ ನೂಕಾಟದಿಂದ ಹೊರಬರಲಾಗದೇ, ಅಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ.
ಇತ್ತ ವೈಕುಂಠ ಏಕಾದಶಿಯಂದು ಶ್ರೀನಿವಾಸನ ದರ್ಶನ ಪಡೆದು, ಸ್ವರ್ಗದ ಬಾಗಿಲ ಮೂಲಕ ಹೊರಬಂದರೆ, ಮೋಕ್ಷ ದೊರೆಲಿದೆ ಎಂಬ ನಂಬಿಕೆ ಭಕ್ತರ ಸಮೂಹದಲ್ಲಿದೆ. ಹೀಗಾಗಿಯೇ, ವೈಕುಂಠ ಏಕಾದಶಿ ದಿನದಂದು ದರ್ಶನಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ.
ಇನ್ನು ಕೇವಲ ತಿರುಪತಿ ಮಾತ್ರವಲ್ಲದೆ, ವೈಕುಂಠ ಏಕಾದಶಿ ಎಲ್ಲಾ ದೇವಾಲಯಗಳಲ್ಲೂ ಭಕ್ತರ ದಂಡು ಹರಿದುಬರಲಿದ್ದು, ಅದರ ಮೊದಲೇ ತಿರುಮಲದಲ್ಲಿ ಕಾಲ್ತುಳಿತ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಅನಾಹುತ ಕೂಡ ನಡೆದಿದೆ. 6 ಮಂದಿ ಮೃತಪಟ್ಟಿರುವ ಘಟನೆ ನಡೆದಿದ್ದು, ಭಕ್ತರು ಎಚ್ಚರಿಕೆಯಿಂದ ಇರಬೇಕೆಂದು ಟಿಟಿಡಿ ಆಡಳಿತ ಮಂಡಳಿ ಸೂಚಿಸಿದೆ.
ಅದೇನೇ ಇರಲಿ, ಭಕ್ತಿಯ ಪರಾಕಾಷ್ಠೆಯ ಹೆಸರಿನಲ್ಲಿ ತಿರುಮಲದಲ್ಲಿ ಘೋರ ದುರಂತ ಸಂಭವಿಸಿರುವುದು ಮಾತ್ರ ವಿಪರ್ಯಾಸ.