ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮುಅವರು ಶುಕ್ರವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಕ್ರಿಕೆಟರ್ ವೈಭವ್ ಸೂರ್ಯವಂಶಿ ಅವರಿಗೆ ನೀಡಿ ಗೌರವಿಸಿದರು. 14 ವರ್ಷದ ಈ ಬಾಲಕನಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ (5-18 ವರ್ಷ) ನೀಡಿ ಗೌರವಿಸಲಾಯಿತು.
ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಮತ್ತು ಕ್ರೀಡೆಗಳಲ್ಲಿ ಅಸಾಧಾರಣ ಸಾಧನೆಗಳಿಗಾಗಿ ವಾರ್ಷಿಕವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಕಾರ್ಯಕ್ರಮ ರಾಷ್ಟ್ರಪತಿ ಭವನದಲ್ಲಿ ನಡೆಯಿತು. ಪ್ರಶಸ್ತಿ ಸ್ವೀಕರಿಸುವ ಕಾರಣಕ್ಕಾಗಿ, ವೈಭವ್ ಮಣಿಪುರ ವಿರುದ್ಧದ ಬಿಹಾರದ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ತಪ್ಪಿಸಿಕೊಂಡರು.
ಸೂರ್ಯವಂಶಿ ಸೇರಿ ಇತರ 19 ಮಕ್ಕಳನ್ನು ಆಯಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು. ನಿಮ್ಮ ಸಾಧನೆಗಳು ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ದ್ರೌಪದಿ ಮುರ್ಮು ಹೇಳಿದರು.
“ನಿಮ್ಮ ಅಸಾಧಾರಣ ಪ್ರತಿಭೆಗಳು ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ ಮತ್ತು ಕ್ರೀಡೆಗಳಲ್ಲಿ ಪ್ರದರ್ಶನಗೊಂಡಿವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಗಮನಾರ್ಹ ಕೆಲಸ ಮಾಡಿದ್ದೀರಿ. ಸಮಯದ ಮಿತಿಯಿಂದಾಗಿ ನಾನು ಕೆಲವನ್ನು ಮಾತ್ರ ಉಲ್ಲೇಖಿಸಬಹುದಾದರೂ, ಇಂದು ಗೌರವಿಸಲ್ಪಡುವ ಪ್ರತಿಯೊಂದು ಮಗುವೂ ಅಷ್ಟೇ ಮುಖ್ಯ ಮತ್ತು ಗೌರವಾನ್ವಿತವಾಗಿದೆ” ಎಂದು ಮುರ್ಮು ಹೇಳಿದರು.
ಇದನ್ನೂ ಓದಿ : ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚಿನ್ನದ ರಥ | “ಪಾರ್ಥಸಾರಥಿ ಸುವರ್ಣ ರಥ”ದ ವಿಶೇಷತೆ ಏನು?



















