ಬೆಂಗಳೂರು: ವಿಪ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದು, ನನಗೆ ನೋವು ಹಾಗೂ ದುಃಖ ನೀಡಿದೆ. ನಾನು ಒಬ್ಬಳು ತಾಯಿ. ನನ್ನ ತೇಜೋವಧೆ ಮಾಡುವ ಯತ್ನ ನಡೆದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಹಿಳಾ ಪ್ರತಿನಿಧಿ. ನನಗೆ ತುಂಬಾ ಅವಮಾನವಾಗಿದೆ. ನನ್ನ ಕ್ಷೇತ್ರದ ಜನರು, ಮತದಾರರು, ಕಾಂಗ್ರೆಸ್ ಹಾಗೂ ಕುಟುಂಬಸ್ಥರು ಜೊತೆಗಿದ್ದಾರೆ. ಎಲ್ಲರೂ ನನಗೆ ಧೈರ್ಯ ಹೇಳುತ್ತಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ನಾವು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವು. ಈ ವೇಳೆ ಸಿ.ಟಿ. ರವಿ ರಾಹುಲ್ ಗಾಂಧಿ ಡ್ರಗ್ ಎಡಿಕ್ಟ್ ಅಂತ ಹೇಳಿದರು. ತಾಳ್ಮೆಯಿಂದ ಕುಳಿತಿದ್ದ ನಮಗೆ ಆ ಮಾತು ಕೆರಳಿಸಿತು. ಆಗ ನಾನು ನೀವು ಕೂಡ ಅಪಘಾತ ಮಾಡಿದ್ದೀರಿ. ಹಾಗಾದರೆ ನಿಮಗೆ ಕೊಲೆಗಾರ ಅನ್ನಬೇಕೆ ಎಂದು ಪ್ರಶ್ನಿಸಿದೆ. ಈ ವೇಳೆ ಸಿ.ಟಿ. ರವಿ ಆ ಪದ ಬಳಕೆ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಸುರಿಸಿದ್ದಾರೆ.
ನಾನು ನನ್ನ ಪಾಡಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಟಿ ರವಿ ಮಾತಿನಿಂದ ನನಗೆ ಅವಮಾನವಾಗಿದೆ. ನಾನೂ ಒಬ್ಬಳು ತಾಯಿ. ಒಬ್ಬ ಅಕ್ಕ. ನನ್ನ ನೋಡಿ ಸಾವಿರಾರು ಜನರು ರಾಜಕೀಯಕ್ಕೆ ಬರಬೇಕು ಅಂತಾ ತೀರ್ಮಾನಿಸುತ್ತಿದ್ದಾರೆ. ಸಾಕಷ್ಟು ಕಷ್ಟ ಪಟ್ಟು ನಾನು ಮೇಲೆ ಬಂದಿದ್ದೇನೆ. ನನ್ನ ಪಾಡಿಗೆ ರಾಜಕೀಯ ಮಾಡುತ್ತ ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ವಿಧಾನ ಪರಿಷತ್ ಅಂದರೆ ಅದು ಚಿಂತಕರ ಛಾವಡಿ. ಇಂತಹ ಸ್ಥಳದಲ್ಲಿ ಈ ರೀತಿಯ ಹೇಳಿಕೆ ಖಂಡನೀಯ. ಇದನ್ನು ಇಡೀ ದೇಶವೇ ಖಂಡಿಸುತ್ತದೆ ಎಂದು ಭಾವುಕರಾಗಿದ್ದಾರೆ.