ಬೆಂಗಳೂರು: ಭ್ರಷ್ಟಾಚಾರದ ಆರೋಪ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆಂದು ಜೆಡಿಎಸ್ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, “ಕಳ್ಳನ ಮನಸ್ಸು ಹುಳ್ಳಳ್ಳಗೆ. ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರೇ ನಿಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೇ, ಕಾನೂನಿನಡಿಯಲ್ಲಿ ಉತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ನೀವೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ವಿರುದ್ಧ ಹತಾಶೆ, ಸಿಟ್ಟು, ಆಕ್ರೋಶದಿಂದ ಕೀಳು ಮಟ್ಟದ, ಅವಹೇಳನಕಾರಿ ಪದಗಳನ್ನು ಬಳಸಿ ಉತ್ತರಿಸಿದ್ದೀರಿ ” ಎಂದು ಆರೋಪಿಸಿದೆ.
ನಿಮ್ಮ ಅಕ್ರಮ, ಭ್ರಷ್ಟಾಚಾರಗಳನ್ಮು ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಯಲು ಮಾಡಿದ್ದು ಅಪರಾಧವೇ? ಅದಕ್ಕೆ ಕೇಂದ್ರ ಸಚಿವರ ಕುರಿತು ನೀವು ಕೀಳು ಮಟ್ಟದ ಪದ ಬಳಸಿರುವುದು ಅಕ್ಷಮ್ಯ. ನೀವೊಬ್ಬ ಐಪಿಎಸ್ ಅಧಿಕಾರಿಯಾಗಿರಲು ಅನರ್ಹ ” ಎಂದು ಜೆಡಿಎಸ್ ಗುಡುಗಿದೆ.
ಭೂ ವ್ಯವಹಾರವೊಂದರಲ್ಲಿ 20 ಕೋಟಿಗೆ ಬೇಡಿಕೆ ಇಟ್ಟಿದ್ದ ಕಡು ಭ್ರಷ್ಟ ಅಧಿಕಾರಿ ನೀವೇ ಅಲ್ಲವೇ? ಈ ಸಂಬಂಧ ನಿಮ್ಮ ವಿರುದ್ಧ ಇನ್ಸ್ ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ರಾಜಕಾಲುವೆ ಮೇಲೆ ನಿರ್ಮಿಸುತ್ತಿರುವ ಬಹು ಮಹಡಿಯ ವಾಣಿಜ್ಯ ಕಟ್ಟಡವನ್ನು ಎಷ್ಟು ಕೋಟಿ ಲಂಚ ಪಡೆದು ಕಟ್ಟುತ್ತಿದ್ದೀರಿ ತಿಳಿಸುವಿರಾ? ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ ಎಂದು ಪ್ರಶ್ನಿಸಿದೆ.
ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿಯಾಗಿರುವ ಎಂ ಚಂದ್ರಶೇಖರ್ ಓರ್ವ ಭ್ರಷ್ಟ ಅಧಿಕಾರಿ ಈತನ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿವೆ. ಹಲವು ಅಪರಾಧ ಮಾಡಿರುವ ಇಂತಹ ಕಳಂಕಿತ ಅಧಿಕಾರಿಗಳಿಂದ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ತನಿಖೆ ಅಸಾಧ್ಯ.
ಮಾನ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರೇ, ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಪದ ಬಳಸಿರುವ ಈ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೂಡ ಜೆಡಿಎಸ್ ಆಗ್ರಹಿಸಿದೆ.
ಅಲ್ಲದೇ, ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರ ಅಕ್ರಮಗಳ ಬಗ್ಗೆಯೂ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಐಪಿಎಸ್ ಅಸೋಸಿಯೇಷನ್, ಕೇಂದ್ರ ಗೃಹ ಸಚಿವರು ಈ ಐಪಿಎಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು ” ಎಂದು ಜೆಡಿಎಸ್ ಹೇಳಿದೆ. ಪದ ಬಳಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.