ವಾಷಿಂಗ್ಟನ್: ಹಲವು ದೇಶಗಳಿಗೆ ಸುಂಕ ಹೇರಿ ಈಗ ಅದರ ತಾಪ ಎದುರಿಸುತ್ತಿರುವ ಅಮೆರಿಕಕ್ಕೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ಟ್ರಂಪ್ ವಿಧಿಸಿರುವ ಸುಂಕಗಳು ಕಾನೂನುಬಾಹಿರ ಎಂದು ಈಗಾಗಲೇ ಅಮೆರಿಕದ ಕೆಳಹಂತದ ನ್ಯಾಯಾಲಯ ತೀರ್ಪು ನೀಡಿದ್ದು, ಅದನ್ನು ಪ್ರಶ್ನಿಸಿ ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಒಂದು ವೇಳೆ, ಈ “ಪ್ರತೀಕಾರದ ಸುಂಕಗಳನ್ನು” (reciprocal tariffs) ಸುಪ್ರೀಂ ಕೋರ್ಟ್ ಕೂಡ ರದ್ದುಗೊಳಿಸಿದರೆ, ಸುಂಕದ ರೂಪದಲ್ಲಿ ಸಂಗ್ರಹಿಸಿದ ಹಣದ ಅರ್ಧದಷ್ಟನ್ನು ಮರುಪಾವತಿಸಲಾಗುವುದು ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಎನ್‌ಬಿಸಿ ನ್ಯೂಸ್‌ನ “ಮೀಟ್ ದಿ ಪ್ರೆಸ್” ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸ್ಕಾಟ್ ಬೆಸೆಂಟ್, “ನ್ಯಾಯಾಲಯವು ಸುಂಕಗಳನ್ನು ಅಕ್ರಮವೆಂದು ಘೋಷಿಸಿದರೆ, ನಾವು ಸಂಗ್ರಹಿಸಿದ ಸುಂಕಗಳಲ್ಲಿ ಸುಮಾರು ಅರ್ಧದಷ್ಟನ್ನು ಮರುಪಾವತಿ ಮಾಡಬೇಕಾಗುತ್ತದೆ. ಇದು ಸರ್ಕಾರದ ಖಜಾನೆಗೆ ದೊಡ್ಡ ಹೊಡೆತ ನೀಡಲಿದೆ. ಆದರೆ ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಲೇಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
ಸುಂಕಗಳನ್ನು ವಿಧಿಸಲು “ಇತರ ಹಲವಾರು ಮಾರ್ಗಗಳಿವೆ” ಎಂದು ಅವರು ಉಲ್ಲೇಖಿಸಿದರಾದರೂ, ಆ ಕ್ರಮಗಳು “ಅಧ್ಯಕ್ಷ ಟ್ರಂಪ್ ಅವರ ಚೌಕಾಶಿ ಸಾಮರ್ಥ್ಯವನ್ನು ಕುಗ್ಗಿಸುತ್ತವೆ” ಎಂದೂ ಹೇಳಿದ್ದಾರೆ.
ಇನ್ನೊಂದೆಡೆ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಕೂಡ, ಸುಪ್ರೀಂ ಕೋರ್ಟ್ ಸರ್ಕಾರದ ವಿರುದ್ಧ ತೀರ್ಪು ನೀಡಿದರೆ, ಸುಂಕಗಳನ್ನು ಜಾರಿಗೊಳಿಸಲು “ಇತರ ಕಾನೂನಾತ್ಮಕ ಅಧಿಕಾರಗಳು” ಲಭ್ಯವಿವೆ ಎಂದು ಹೇಳಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂ ಸುಂಕಗಳನ್ನು ಜಾರಿಗೆ ತರಲು ಬಳಸಲಾಗಿದ್ದ “ಸೆಕ್ಷನ್ 232” ಕೂಡ ಇತರೆ ಆಯ್ಕೆಗಳಲ್ಲಿ ಸೇರಿವೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯದ ತೀರ್ಪು
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ್ದ ಸುಂಕಗಳು ಕಾನೂನುಬಾಹಿರವೆಂದು ಕೆಳಹಂತದ ನ್ಯಾಯಾಲಯ ನೀಡಿರುವ ತೀರ್ಪನ್ನು ಶೀಘ್ರವಾಗಿ ರದ್ದುಗೊಳಿಸುವಂತೆ ಟ್ರಂಪ್ ಆಡಳಿತವು ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಆಗಸ್ಟ್ 29 ರಂದು, ಫೆಡರಲ್ ಸರ್ಕ್ಯೂಟ್‌ಗಾಗಿನ ಯುಎಸ್ ಮೇಲ್ಮನವಿ ನ್ಯಾಯಾಲಯವು 7:4 ಮತಗಳಿಂದ, ಟ್ರಂಪ್ ಅವರು ತಮ್ಮ ಅಧಿಕಾರವನ್ನು ಮೀರಿ ಸುಂಕಗಳನ್ನು ವಿಧಿಸಿದ್ದಾರೆ ಎಂದು ತೀರ್ಪು ನೀಡಿತ್ತು. ಸುಂಕ ವಿಧಿಸುವುದು “ಕಾಂಗ್ರೆಸ್‌ನ ಅಧಿಕಾರವೇ ಹೊರತು ಅಧ್ಯಕ್ಷರದ್ದಲ್ಲ” ಎಂದು ನ್ಯಾಯಾಲಯ ಹೇಳಿತ್ತು.
ಇದಕ್ಕೂ ಮುನ್ನ ಮೇ ತಿಂಗಳಲ್ಲಿ, ನ್ಯೂಯಾರ್ಕ್ ಮೂಲದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯವು ಈ ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು.
ಆರ್ಥಿಕ ಪರಿಣಾಮಗಳು
ಟ್ರಂಪ್ ಆಡಳಿತದ ಪ್ರಕಾರ, ಈ ಪ್ರಕರಣದ ತೀರ್ಪು 2026ರ ಜೂನ್‌ವರೆಗೆ ವಿಳಂಬವಾದರೆ, ಸುಮಾರು 750 ಶತಕೋಟಿಯಿಂದ 1 ಟ್ರಿಲಿಯನ್ ಡಾಲರ್‌ಗಳಷ್ಟು ಸುಂಕ ಸಂಗ್ರಹವಾಗಬಹುದು. ನಂತರ ಅದನ್ನು ಹಿಂತಿರುಗಿಸುವುದು ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು.
ಅಮೆರಿಕದ ನ್ಯಾಯಾಲಯಗಳಿಂದ ಅಕ್ರಮ ಎಂದು ಪರಿಗಣಿಸಲಾದ ಸುಂಕಗಳಿಗಾಗಿ, ಅಮೆರಿಕದ ಉದ್ಯಮಗಳು ಆಗಸ್ಟ್ 24 ರವರೆಗೆ 210 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹಣವನ್ನು ಪಾವತಿಸಿವೆ. ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದರೆ, ಅಮೆರಿಕದ ಖಜಾನೆಯು ಸಂಗ್ರಹಿಸಿದ ಸುಂಕದ ಆದಾಯವನ್ನು “ಹಿಂತಿರುಗಿಸಬೇಕಾಗಬಹುದು” ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೇಲ್ಮನವಿ ನ್ಯಾಯಾಲಯವು ತನ್ನ ತೀರ್ಪಿನ ಜಾರಿಯನ್ನು ಅಕ್ಟೋಬರ್ 14 ರವರೆಗೆ ತಡೆಹಿಡಿದಿದ್ದು, ಟ್ರಂಪ್ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ನೀಡಿದೆ.