ನಾಗಪುರ: “ನಾವು ಮತ್ತು ಅವರು ಎಂಬ ಮನಸ್ಥಿತಿ ಸ್ವೀಕಾರಾರ್ಹವಲ್ಲ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ನಾವು ಒಪ್ಪಿಕೊಂಡು ಮುನ್ನಡೆಯಬೇಕು” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನಾಗಪುರದ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯದಶಮಿ ಉತ್ಸವದಲ್ಲಿ ಅವರು ಮಾಡಿದ ಭಾಷಣದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಅಮೆರಿಕವು ಭಾರತದ ಮೇಲೆ ಹೇರುತ್ತಿರುವ ಸುಂಕದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಭಾಗವತ್, “ಆಮದಿನ ಮೇಲಿನ ಅವಲಂಬನೆ ಅನಿವಾರ್ಯವಾಗಬಾರದು. ಸ್ವದೇಶಿ ಅಥವಾ ಸ್ವಾವಲಂಬಿ ಉತ್ಪಾದನೆಗೆ ಪರ್ಯಾಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಅಮೆರಿಕ ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸುಂಕ ನೀತಿಯನ್ನು ಜಾರಿಗೆ ತಂದಿದೆ. ಆದರೆ, ಇದರಿಂದ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಜಗತ್ತು ಪರಸ್ಪರ ಅವಲಂಬನೆಯಿಂದ ನಡೆಯುತ್ತದೆ. ಯಾವುದೇ ದೇಶ ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ. ಆದರೆ ಈ ಅವಲಂಬನೆ ಅನಿವಾರ್ಯತೆಯಾಗಿ ಬದಲಾಗಬಾರದು. ನಾವು ಸ್ವದೇಶಿ ಸರಕುಗಳ ಮೇಲೆ ಭರವಸೆ ಇಡಬೇಕು ಮತ್ತು ಆತ್ಮನಿರ್ಭರತೆಯತ್ತ ಗಮನಹರಿಸಬೇಕು. ಇದರ ಜತೆ ಜತೆಗೆ, ನಮ್ಮ ಸ್ನೇಹಪರ ರಾಷ್ಟ್ರಗಳೊಂದಿಗೆ ಬಲವಂತವಿಲ್ಲದೆ, ನಮ್ಮ ಇಚ್ಛೆಯಂತೆ ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಶ್ರಮಿಸಬೇಕು” ಎಂದು ಅವರು ಹೇಳಿದ್ದಾರೆ.
“ಸಾಮಾಜಿಕ ಸಾಮರಸ್ಯಕ್ಕೆ ಕರೆ”
ಭಾರತದ ವೈವಿಧ್ಯತೆಯು ದೇಶದ ಪರಂಪರೆಯಾಗಿದೆ ಎಂದು ಒತ್ತಿಹೇಳಿದ ಭಾಗವತ್, “ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕು. ಕೆಲವು ಭಿನ್ನಾಭಿಪ್ರಾಯಗಳು ಅಪಶ್ರುತಿಗೆ ಕಾರಣವಾಗಬಹುದು. ಆದರೆ, ಭಿನ್ನಾಭಿಪ್ರಾಯಗಳನ್ನು ಕಾನೂನಿನ ಚೌಕಟ್ಟಿನೊಳಗೆ ವ್ಯಕ್ತಪಡಿಸಬೇಕು. ಸಮುದಾಯಗಳನ್ನು ಪ್ರಚೋದಿಸುವುದು ಸ್ವೀಕಾರಾರ್ಹವಲ್ಲ. ಆಡಳಿತವು ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು, ಆದರೆ ಯುವಕರು ಸಹ ಜಾಗೃತರಾಗಿರಬೇಕು ಮತ್ತು ಅಗತ್ಯವಿದ್ದರೆ ಮಧ್ಯಪ್ರವೇಶಿಸಬೇಕು. ಅರಾಜಕತೆಯ ವ್ಯಾಕರಣವನ್ನು ನಿಲ್ಲಿಸಬೇಕು” ಎಂದರು. ‘ನಾವು’ ಮತ್ತು ‘ಅವರು’ ಎಂಬ ಮನಸ್ಥಿತಿ ಸಲ್ಲದು ಎಂದು ಅವರು ಸ್ಪಷ್ಟವಾಗಿ ನುಡಿದಿದ್ದಾರೆ.
“ನೆರೆಹೊರೆಯ ಅಶಾಂತಿ ಮತ್ತು ಆಂತರಿಕ ಭದ್ರತೆ”
ನೆರೆಯ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಜನಾಂದೋಲನದಿಂದಾದ ಅರಾಜಕತೆಯ ಬಗ್ಗೆ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ “ನೆರೆಹೊರೆಯಲ್ಲಿನ ಅಶಾಂತಿ ಉತ್ತಮ ಸಂಕೇತವಲ್ಲ. ಭಾರತದಲ್ಲಿ ಇಂತಹ ಅಡಚಣೆಗಳನ್ನು ಸೃಷ್ಟಿಸಲು ಬಯಸುವ ಶಕ್ತಿಗಳು ದೇಶದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ” ಎಂದೂ ಎಚ್ಚರಿಸಿದ್ದಾರೆ. “ಪ್ರಜಾಸತ್ತಾತ್ಮಕ ಚಳವಳಿಗಳು ಬದಲಾವಣೆಯನ್ನು ತರುತ್ತವೆ, ಆದರೆ ಹಿಂಸಾತ್ಮಕ ದಂಗೆಗಳು ಏನನ್ನೂ ಸಾಧಿಸುವುದಿಲ್ಲ. ಅವು ಕೇವಲ ಅರಾಜಕತೆಯನ್ನು ಸೃಷ್ಟಿಸುತ್ತವೆ. ಇತಿಹಾಸವನ್ನು ನೋಡಿ, ಯಾವುದೇ ಕ್ರಾಂತಿಯು ತನ್ನ ಉದ್ದೇಶವನ್ನು ಪೂರೈಸಿಲ್ಲ. ಅರಾಜಕತೆಯು ವಿದೇಶಿ ಶಕ್ತಿಗಳಿಗೆ ತಮ್ಮ ಆಟವಾಡಲು ಅನುವು ಮಾಡಿಕೊಡುತ್ತದೆ” ಎಂದಿದ್ದಾರೆ.
“ಪಹಲ್ಗಾಮ್ ದಾಳಿ ಮತ್ತು ಸರ್ಕಾರದ ಪ್ರತಿಕ್ರಿಯೆ”
ಮೇ ತಿಂಗಳಿನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಅವರು, “ಧರ್ಮವನ್ನು ಕೇಳಿ 26 ಮುಗ್ಧರನ್ನು ಕೊಂದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಭಾರತ ಸರ್ಕಾರವು ಯೋಜಿತ ರೀತಿಯಲ್ಲಿ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ದೇಶದ ಬಲಿಷ್ಠ ನಾಯಕತ್ವ ಮತ್ತು ಸೇನಾ ಪಡೆಗಳ ಶೌರ್ಯದ ಜೊತೆಗೆ, ಈ ಅವಧಿಯಲ್ಲಿ ಸಮಾಜದ ಶಕ್ತಿ ಮತ್ತು ಏಕತೆಯನ್ನು ನಾವು ಕಂಡೆವು” ಎಂದು ಹೇಳಿದ್ದಾರೆ.