ಇಸ್ಲಾಮಾಬಾದ್ : ಅಮೆರಿಕ ಮತ್ತು ಪಾಕಿಸ್ತಾನದ ದಶಕಗಳ ಕಾಲದ ಸಂಬಂಧದ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ವೈರಲ್ ಆಗುತ್ತಿದೆ. ಅಮೆರಿಕವು ತನ್ನ ಸ್ವಾರ್ಥ ಮತ್ತು ಕಾರ್ಯತಂತ್ರದ ಉದ್ದೇಶಗಳಿಗಾಗಿ ಪಾಕಿಸ್ತಾನವನ್ನು ಬಳಸಿಕೊಂಡಿತು ಮತ್ತು ಕೆಲಸ ಮುಗಿದ ಮೇಲೆ “ಟಾಯ್ಲೆಟ್ ಪೇಪರ್‌ನಂತೆ” ಕಸಕ್ಕೆ ಎಸೆಯಿತು ಎಂದು ಅವರು ಕಿಡಿಕಾರಿದ್ದಾರೆ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಾಕಿಸ್ತಾನ ಮಾಡಿದ ತಪ್ಪುಗಳೇ ಇಂದು ದೇಶ ಅನುಭವಿಸುತ್ತಿರುವ ಭಯೋತ್ಪಾದನೆಗೆ ಮೂಲ ಕಾರಣ ಎಂದೂ ಒಪ್ಪಿಕೊಂಡಿದ್ದಾರೆ.
1999ರ ನಂತರ ಹಾಗೂ ವಿಶೇಷವಾಗಿ 2001ರ ಸೆಪ್ಟೆಂಬರ್ 11ರ ದಾಳಿಯ ಬಳಿಕ ಅಮೆರಿಕದ ಜೊತೆ ಪಾಕಿಸ್ತಾನ ಕೈಜೋಡಿಸಿದ್ದು ದೇಶಕ್ಕೆ ದೊಡ್ಡ ಮಟ್ಟದ ವಿನಾಶ ತಂದಿದೆ ಎಂದು ಆಸಿಫ್ ವಿಶ್ಲೇಷಿಸಿದ್ದಾರೆ. “ಪಾಕಿಸ್ತಾನವನ್ನು ಅಮೆರಿಕವು ಅತ್ಯಂತ ಕೀಳಾಗಿ ನಡೆಸಿಕೊಂಡಿತು. ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ನಮ್ಮನ್ನು ಬಳಸಿಕೊಂಡು, ನಂತರ ಕಿಂಚಿತ್ತೂ ಮರ್ಯಾದೆ ನೀಡದೆ ಕೈಬಿಟ್ಟಿತು,” ಎಂದು ಅವರು ಸಂಸತ್ತಿನಲ್ಲಿ ನೋವು ತೋಡಿಕೊಂಡಿದ್ದಾರೆ. ಅಮೆರಿಕವು ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ನಂತರ ಪಾಕಿಸ್ತಾನವು ಹಿಂಸಾಚಾರ, ಆರ್ಥಿಕ ಕುಸಿತ ಮತ್ತು ತೀವ್ರಗಾಮಿಗಳ ಕಾಟಕ್ಕೆ ಸಿಲುಕಿ ತತ್ತರಿಸುತ್ತಿದೆ ಎಂದು ಅವರು ವಿವರಿಸಿದರು.
ಆಫ್ಘನ್ ಯುದ್ಧದ ಹಸ್ತಕ್ಷೇಪ ಒಂದು ಐತಿಹಾಸಿಕ ತಪ್ಪು
ಪಾಕಿಸ್ತಾನವು ಎರಡು ಬಾರಿ ಆಫ್ಘನ್ ಯುದ್ಧಗಳಲ್ಲಿ ಭಾಗಿಯಾಗಿದ್ದನ್ನು ಆಸೀಫ್ ದೊಡ್ಡ ಪ್ರಮಾದ ಎಂದು ಕರೆದಿದ್ದಾರೆ. ಈ ಯುದ್ಧಗಳು ಧರ್ಮದ ಹೆಸರಿನಲ್ಲಿ ನಡೆದವು ಎಂಬ ಅಧಿಕೃತ ವಾದವನ್ನು ಅವರು ತಳ್ಳಿಹಾಕಿದ್ದಾರೆ. “ಹಿಂದಿನ ಮಿಲಿಟರಿ ಸರ್ವಾಧಿಕಾರಿಗಳಾದ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಅವರು ಇಸ್ಲಾಂ ಧರ್ಮದ ರಕ್ಷಣೆಗಾಗಿ ಅಫ್ಘಾನಿಸ್ತಾನ ಯುದ್ಧಕ್ಕೆ ಧುಮುಕಲಿಲ್ಲ, ಬದಲಿಗೆ ದೊಡ್ಡ ದೇಶವೊಂದನ್ನು (ಅಮೆರಿಕ) ಓಲೈಸಲು ಈ ತಪ್ಪು ಮಾಡಿದರು,” ಎಂದು ಅವರು ನೇರವಾಗಿ ದೂರಿದ್ದಾರೆ. ಪಾಕಿಸ್ತಾನದ ಯುವಕರನ್ನು ‘ಜಿಹಾದ್’ ಹೆಸರಿನಲ್ಲಿ ಯುದ್ಧಕ್ಕೆ ತಳ್ಳಿದ್ದು ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಇತಿಹಾಸ ಮರೆತ ಪಾಕಿಸ್ತಾನಕ್ಕೆ ‘ಬ್ಲೋಬ್ಯಾಕ್’ ಶಾಕ್
ಪಾಕಿಸ್ತಾನವು ತನ್ನ ಕರಾಳ ಇತಿಹಾಸವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ ಮತ್ತು ತನ್ನ ತಪ್ಪುಗಳನ್ನು ನಿರಾಕರಿಸುತ್ತಲೇ ಬಂದಿದೆ ಎಂದು ಆಸಿಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಪಾಕಿಸ್ತಾನದಲ್ಲಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಹಿಂದಿನ ಸರ್ವಾಧಿಕಾರಿಗಳು ಮಾಡಿದ ತಪ್ಪುಗಳ ಪ್ರತಿಫಲ ಅಥವಾ ‘ಬ್ಲೋಬ್ಯಾಕ್’ ಆಗಿದೆ. ಈ ನಷ್ಟವನ್ನು ಎಂದಿಗೂ ಭರಿಸಲು ಸಾಧ್ಯವಿಲ್ಲ ಮತ್ತು ನಾವು ಮಾಡಿದ ತಪ್ಪುಗಳು ಸರಿಪಡಿಸಲಾಗದ ಹಂತಕ್ಕೆ ತಲುಪಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಯುದ್ಧಗಳನ್ನು ಸಮರ್ಥಿಸಿಕೊಳ್ಳಲು ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲಾಯಿತು ಎಂಬ ಆಘಾತಕಾರಿ ಅಂಶವನ್ನೂ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : “ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆಂದು ನನ್ನ ಪತ್ನಿಗೆ ತಿಳಿಸಿ” | ವಿಮಾನ ಪತನಕ್ಕೂ ಮುನ್ನ ಪೈಲಟ್ ಆಡಿದ ಮಾತುಗಳು ವೈರಲ್!



















