ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಇಲಿಗಳ ಹಾವಳಿ ಮಿತಿಮೀರಿದ್ದು, ಇದನ್ನು ಹತ್ತಿಕ್ಕಲು ನಗರ ಆಡಳಿತವು ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕೇವಲ ಇಲಿಗಳನ್ನು ಕೊಲ್ಲುವ ಬದಲು, ಅವುಗಳ ಸಂತಾನೋತ್ಪತ್ತಿಯನ್ನೇ ತಡೆಯಲು ಅಂದಾಜು 1.2 ಕೋಟಿ ರೂ. ವೆಚ್ಚದ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಇಲಿಗಳಿಗೆ ವಿಷದ ಜೊತೆಗೆ ‘ಸಂತಾನಶಕ್ತಿ ಹರಣ’ (Birth Control) ಔಷಧಿಯನ್ನು ನೀಡಲಾಗುತ್ತಿದೆ.

ಈ ಹಿಂದೆ ನಗರದ ನೈರ್ಮಲ್ಯ ಅಧಿಕಾರಿಗಳು ಕೇವಲ ಇಲಿಗಳ ಬಿಲಗಳಿಗೆ ವಿಷ ಹಾಕಿ ಸುಮ್ಮನಾಗುತ್ತಿದ್ದರು. ಆದರೆ ಹೊಸ ಯೋಜನೆಯಡಿ ‘ಡಿಸಿ ಹೆಲ್ತ್’ ವಿಭಾಗವು ಎರಡು ಹಂತದ ತಂತ್ರಗಾರಿಕೆ ರೂಪಿಸಿದೆ. ಮೊದಲು ಇಲಿಗಳನ್ನು ಕೊಲ್ಲುವ ವಿಷಪೂರಿತ ಆಹಾರವನ್ನು ನೀಡಲಾಗುತ್ತದೆ. ಇದರಿಂದ ಪ್ರೌಢ ಇಲಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಒಂದು ವೇಳೆ ವಿಷದಿಂದ ತಪ್ಪಿಸಿಕೊಂಡು ಬದುಕುಳಿಯುವ ಇಲಿಗಳಿಗೆ ದ್ರವ ರೂಪದ ಗರ್ಭನಿರೋಧಕ ಔಷಧಿಯನ್ನು ನೀಡಲಾಗುತ್ತದೆ. ಇದರಿಂದ ಅವು ಮುಂದಕ್ಕೆ ಮರಿ ಹಾಕದಂತೆ ತಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
3 ವಾರಗಳ ಕಾರ್ಯಾಚರಣೆ
ಈ ಯೋಜನೆಯನ್ನು ಮೊದಲು ಅತಿ ಹೆಚ್ಚು ಇಲಿಗಳಿರುವ ಮತ್ತು ರೆಸ್ಟೋರೆಂಟ್ಗಳು ಹೆಚ್ಚಾಗಿರುವ ‘ಆಡಮ್ಸ್ ಮಾರ್ಗನ್’ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಇಲಿಗಳು ಗರ್ಭಧರಿಸಿ ಮರಿ ಹಾಕಲು ಕೇವಲ ಮೂರು ವಾರಗಳ ಸಮಯ ತೆಗೆದುಕೊಳ್ಳುವುದರಿಂದ, ಆರೋಗ್ಯ ಇಲಾಖೆಯು ಪ್ರತಿ ವಲಯದಲ್ಲಿ ಮೂರು ವಾರಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಿದೆ. “ನಾವು ಮೊದಲು ಇಲಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ, ನಂತರ ಬದುಕುಳಿದಿರುವ ಮರಿಗಳು ಸಂತಾನೋತ್ಪತ್ತಿ ಮಾಡದಂತೆ ತಡೆಯುತ್ತೇವೆ,” ಎಂದು ಡಿಸಿ ಹೆಲ್ತ್ ನಿರ್ದೇಶಕಿ ಅಯಾನಾ ಬೆನೆಟ್ ತಿಳಿಸಿದ್ದಾರೆ.
ನಾಗರಿಕರ ಸಹಕಾರಕ್ಕೆ ಮೇಯರ್ ಮನವಿ
ಈ ಕಾರ್ಯಾಚರಣೆ ಯಶಸ್ವಿಯಾಗಬೇಕಾದರೆ ಕೇವಲ ಔಷಧ ನೀಡಿದರೆ ಸಾಲದು, ನಾಗರಿಕರ ಸಹಕಾರವೂ ಅಗತ್ಯ ಎಂದು ಆಡಳಿತ ಮಂಡಳಿ ಹೇಳಿದೆ. ಜನರು ಎಲ್ಲೆಂದರಲ್ಲಿ ಆಹಾರದ ತ್ಯಾಜ್ಯಗಳನ್ನು ಎಸೆಯಬಾರದು, ಕಸದ ಡಬ್ಬಿಗಳನ್ನು ಸರಿಯಾಗಿ ಮುಚ್ಚಬೇಕು ಎಂದು ಸೂಚಿಸಲಾಗಿದೆ. ಆಹಾರ ಸಿಗದಿದ್ದರೆ ಮಾತ್ರ ಇಲಿಗಳ ಸಂಖ್ಯೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ. ಈ ಮೊದಲು 2013 ರಲ್ಲಿ ನ್ಯೂಯಾರ್ಕ್ನಲ್ಲಿ ಇಂತಹದ್ದೇ ಪ್ರಯತ್ನ ನಡೆದಿದ್ದರೂ, ಆಗ ಇಲಿಗಳು ಆ ಔಷಧಿಯನ್ನು ಸೇವಿಸಿರಲಿಲ್ಲ. ಆದರೆ ಈಗ ಸುಧಾರಿತ ತಂತ್ರಜ್ಞಾನ ಲಭ್ಯವಿರುವುದರಿಂದ ಈ ಯೋಜನೆ ಯಶಸ್ವಿಯಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ‘ಅಮೆರಿಕಕ್ಕೆ ಶೀಘ್ರವೇ ಕಾದಿದೆ ಬಿಗ್ ಸರ್ಪ್ರೈಸ್’ : ಟ್ರಂಪ್ ಎಚ್ಚರಿಕೆಗೆ ಇರಾನ್ ತಿರುಗೇಟು



















