ಟೆಹ್ರಾನ್ : ಕಳೆದ ಫೆ.28ರಿಂದ ಆರಂಭವಾಗಿರುವ ಇರಾನ್-ಅಮೆರಿಕ ಸಂಘರ್ಷ ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಶುಕ್ರವಾರ ಇರಾನ್ ಪಡೆಗಳು ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್‌ಗಳನ್ನು ರಕ್ಷಿಸಲಾಗಿದ್ದು, ಓರ್ವ ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದ ಪೈಲಟ್‌ಗಾಗಿ ಇರಾನ್ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಿವೆ.
ಎಫ್-15ಇ ಮತ್ತು ಎ-10 ವಾರ್ತ್‌ಹಾಗ್ ಪತನ
ಶುಕ್ರವಾರದ ದಾಳಿಯಲ್ಲಿ ಅಮೆರಿಕದ ಅತ್ಯಾಧುನಿಕ ‘ಎಫ್-15ಇ ಸ್ಟ್ರೈಕ್ ಈಗಲ್’ ಯುದ್ಧ ವಿಮಾನವು ಇರಾನ್ ಭೂಭಾಗದಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗಳ ಪೈಕಿ ಒಬ್ಬರನ್ನು ಅಮೆರಿಕದ ವಿಶೇಷ ಪಡೆಗಳು ರಕ್ಷಿಸಿವೆ. ಆದರೆ ಮತ್ತೋರ್ವ ಪೈಲಟ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೇ ವೇಳೆ, ಇರಾನ್ ದಾಳಿಗೆ ತುತ್ತಾದ ಮತ್ತೊಂದು ‘ಎ-10 ವಾರ್ತ್‌ಹಾಗ್’ ಯುದ್ಧ ವಿಮಾನ ಕುವೈತ್ ಗಡಿಯ ಸಮೀಪ ಪತನಗೊಂಡಿದ್ದು, ಅದರ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆಲಿಕಾಪ್ಟರ್‌ಗಳ ಮೇಲೆ ದಾಳಿ
ನಾಪತ್ತೆಯಾದ ಪೈಲಟ್‌ನ ಪತ್ತೆಗಾಗಿ ತೆರಳಿದ್ದ ಅಮೆರಿಕದ ಎರಡು ‘ಬ್ಲ್ಯಾಕ್ ಹಾಕ್’ ಹೆಲಿಕಾಪ್ಟರ್‌ಗಳ ಮೇಲೂ ಇರಾನ್ ಪಡೆಗಳು ದಾಳಿ ನಡೆಸಿವೆ. ಆದರೆ ಸಮಯಪ್ರಜ್ಞೆ ಮೆರೆದ ಹೆಲಿಕಾಪ್ಟರ್ ಸಿಬ್ಬಂದಿ ಕೂಡಲೇ ಇರಾನ್ ವಾಯುಪ್ರದೇಶದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ‘ಸಿಹೆಚ್-47 ಚಿನೂಕ್’ ಹೆಲಿಕಾಪ್ಟರ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಪೈಲಟನ್ನು ಹಿಡಿದುಕೊಟ್ಟರೆ ಭಾರಿ ಬಹುಮಾನದ ಆಮಿಷ
ನಾಪತ್ತೆಯಾಗಿರುವ ಅಮೆರಿಕದ ಪೈಲಟ್‌ನನ್ನು ಜೀವಂತವಾಗಿ ಸೆರೆಹಿಡಿದು ಒಪ್ಪಿಸುವವರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಇರಾನ್ ಸರ್ಕಾರ ಘೋಷಿಸಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ನೈಋತ್ಯ ಇರಾನ್‌ನಲ್ಲಿ ಪೈಲಟ್‌ಗಾಗಿ ವ್ಯಾಪಕ ಶೋಧ ನಡೆಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಬಗ್ಗೆ ವ್ಯಂಗ್ಯವಾಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಾಲಿಬಾಫ್, “ಆಡಳಿತ ಬದಲಾವಣೆಯ ಗುರಿ ಹೊತ್ತು ಬಂದವರು, ಈಗ ತಮ್ಮ ಪೈಲಟ್‌ಗಳಿಗಾಗಿ ಹುಡುಕಾಟ ನಡೆಸುವ ಸ್ಥಿತಿಗೆ ತಲುಪಿದ್ದಾರೆ” ಎಂದು ಎಕ್ಸ್ (ಟ್ವಿಟರ್) ಮೂಲಕ ಕಾಲೆಳೆದಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇದೊಂದು ಯುದ್ಧದ ಸನ್ನಿವೇಶ, ವಿಮಾನ ಪತನದ ಘಟನೆಯು ಇರಾನ್ ಜೊತೆಗಿನ ಮಾತುಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆಯ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ



















